×
Ad

ಉಕ್ರೇನ್ ಯುದ್ಧದಲ್ಲಿ ರಶ್ಯದ ಮುನ್ನಡೆ ಸ್ಥಗಿತ ಭಾರೀ ನಾಶ, ನಷ್ಟ ಅನುಭವಿಸುತ್ತಿರುವ ಆಕ್ರಮಣಕಾರಿ ಸೇನೆ

Update: 2022-03-18 23:23 IST
photo pti

ಲಂಡನ್,ಮಾ.18: ಉಕ್ರೇನ್ ಮೇಲೆ ಆಕ್ರಮಣ ನಡೆಸಿರುವ ರಶ್ಯದ ಪಡೆಗಳು ಭೂಮಿ, ಸಮುದ್ರ ಅಥವಾ ವಾಯು ಪ್ರದೇಶಗಳಲ್ಲಿ ಕನಿಷ್ಠ ಮುನ್ನಡೆಯನ್ನು ಸಾಧಿಸಿದ್ದು ಮತ್ತು ಅಪಾರ ಸಾವು,ನೋವು ಹಾಗೂ ಸೊತ್ತು ನಷ್ಟವನ್ನು ಅನುಭವಿಸುತ್ತಿದೆೆ ಎಂದು ಬ್ರಿಟನ್‌ನ ರಕ್ಷಣಾ ಸಚಿವಾಲಯ ಗುರುವಾರ ತಿಳಿಸಿದೆ.

 
ರಶ್ಯದ ದಾಳಿಯು ಬಹುತೇಕವಾಗಿ ಸ್ಥಗಿತಗೊಂಡಿದ್ದರೆ, ಉಕ್ರೇನ್‌ನ ಪ್ರತಿರೋಧವು ಅತ್ಯುತ್ತಮವಾದ ಸಮನ್ವಯತೆಯನ್ನು ಕಾಯ್ದುಕೊಂಡು ಮುಂದುವರಿದಿದೆ ಎಂದು ಬ್ರಿಟನ್‌ನ ರಕ್ಷಣಾ ಸಚಿವಾಲಯವು ಬೇಹುಗಾರಿಕಾ ಮಾಹಿತಿಗಳನ್ನು ಆಧರಿಸಿದ ವರದಿಯಲ್ಲಿ ತಿಳಿಸಿದೆ.ಉಕ್ರೇನ್‌ನಲ್ಲಿ ರಶ್ಯದ ಆಕ್ರಮಣವು ಬಹುತೇಕವಾಗಿ ಎಲ್ಲಾ ಮುಂಚೂಣಿಗಳಲ್ಲಿಯೂ ಸ್ಥಗಿತಗೊಂಡಿದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. 

‘‘ ಇತ್ತೀಚಿನ ದಿನಗಳಲ್ಲಿ ರಶ್ಯದ ಪಡೆಗಳು ಭೂಮಿ, ಸಮುದ್ರ ಅಥವಾ ವಾಯು ಮುಂಚೂಣಿಯಲ್ಲಿ ಕನಿಷ್ಠ ಮುನ್ನಡೆಯನ್ನಷ್ಟೇ ಸಾಧಿಸಿವೆ ಮತ್ತು ಅವು ಭಾರೀ ನಾಶ,ನಷ್ಟವನ್ನು ಅನುಭವಿಸುತ್ತಿರುವುದು ಮುಂದುವರಿದಿದೆ. ಉಕ್ರೇನ್‌ನ ಪ್ರತಿರೋಧವು ಅತ್ಯಂತ ಶಕ್ತವಾಗಿದೆ ಮತ್ತು ಅತ್ಯುತ್ತಮವಾದ ಸಮನ್ವಯತೆಯನ್ನು ಹೊಂದಿದೆ. ಎಲ್ಲಾ ಪ್ರಮುಖ ನಗರಗಳು ಸೇರಿದಂತೆ ಉಕ್ರೇನ್ ಪ್ರಾಂತದ ಬಹುತೇಕ ಪ್ರದೇಶಗಳು ಉಕ್ರೇನಿಯನ್ನರ ವಶದಲ್ಲೇ ಇವೆ’’ ಎಂದು ಅದು ಹೇಳಿದೆ.

ರಶ್ಯ-ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ಉತ್ತರ ಅಟ್ಲಾಂಟಿಕ್ ಒಡಂಬಡಿಕೆ ಸಂಘಟನೆ (ನ್ಯಾಟೊ)ಯ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೊಲ್ಟೆನ್‌ಬರ್ಗ್  ಅವರು ಬ್ರುಸೆಲ್ಸ್‌ನಲ್ಲಿ ಕರೆದಿದ್ದ ರಕ್ಷಣಾ ಸಚಿವರುಗಳ ವಿಶೇಷ ಸಭೆಯ ಬಳಿಕ ಬ್ರಿಟನ್ ವಿದೇಶಾಂಗ ಸಚಿವರು ಈ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ.

‘‘ ರಶ್ಯದ ಆಕ್ರಮಣದ ವಿರುದ್ಧ ಬ್ರಿಟನ್ ಹಾಗೂ ನಮ್ಮ ಜೊತೆಗಾರರು ಉಕ್ರೇನ್‌ಗೆ ಬೆಂಬಲ ನೀಡುವುದನ್ನು ಮುಂದುವರಿಸಿದ್ದಾರೆ’’ ಎಂದು ಬ್ರಿಟನ್‌ನ ರಕ್ಷಣಾ ಕಾರ್ಯದರ್ಶಿ ಬೆನ್ ವಾಲೆಸ್ ತಿಳಿಸಿದ್ದಾರೆ. ಅಮೆರಿಕ, ಫ್ರಾನ್ಸ್, ಜರ್ಮನಿ, ಇಟಲಿ, ಟರ್ಕಿ, ಕೆನಡಾ, ಸ್ಲೊವಾಕಿಯಾ, ಸ್ವೀಡನ್ ಹಾಗೂ ಝೆಕ್ ಗಣರಾಜ್ಯದ ಜೊತೆಗೂ ವ್ಯಾಲೆಸ್ ಅವರು ದ್ವಿಪಕ್ಷೀಯ ಹಾಗೂ ಸಣ್ಣ ಗುಂಪುಸಭೆಗಳನ್ನು ನಡೆಸಿದ್ದಾರೆಂದು ಬ್ರಿಟನ್ ರಕ್ಷಣಾ ಸಚಿವಾಲಯ ತಿಳಿಸಿದೆ.

ಉಕ್ರೇನ್‌ ನಿಂದಲೇ ಮಾತುಕತೆ ಸ್ಥಗಿತ: ಪುಟಿನ್ ಆರೋಪ

ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿ ಪರಿಹಾರಮಾರ್ಗಗಳನ್ನು ಕಂಡುಹಿಡಿಯಲು ರಶ.್ವ ಸಿದ್ಧವಿದೆಯಾದರೂ ಉಕ್ರೇನ್ ಅಧಿಕಾರಿಗಳು ಮಾತುಕತೆಗಳನ್ನು ಸ್ಥಗಿತಗೊಳಿಸುತ್ತಿದ್ದಾರೆಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶುಕ್ರವಾರ ಆಪಾದಿಸಿದ್ದಾರೆ.
   
ಜರ್ಮನಿಯ ಚಾನ್ಸಲರ್ ಒಲಾಫ್ ಶೊಲ್ಝ್ ಅವರ ಜೊತೆ ಗುರುವಾರ ದೂರವಾಣಿ ಮೂಲಕ ಮಾತುಕತೆ ನಡೆಸಿದ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾತುಕತೆಗಳನ್ನು ಸ್ಥಗಿತಗೊಳಿಸಲು ಉಕ್ರೇನ್ ಆಡಳಿತವು ಸಾಧ್ಯವಿರುವ ಎಲ್ಲಾ ಮಾರ್ಗೋಪಾಯಗಳನ್ನು ಹುಡುಕಲು ಯತ್ನಿಸುತ್ತಿದೆ ಮತ್ತು ಹೆಚ್ಚೆಚ್ಚು ಅವಾಸ್ತವಿಕ ಪ್ರಸ್ತಾವನೆಗಳನ್ನು ಮುಂದಿಡುತ್ತಿದೆ’’ ಎಂದು ಪುಟಿನ್ ಅಸಮಾಧಾನ ವ್ಯಕ್ತಪಡಿಸಿದರು.
 
ಅದೇನಿದ್ದರೂ ರಶ್ಯವು ತನ್ನ ಸುಪರಿಚಿತವಾದ ತಾತ್ವಿಕ ನಿಲುವುಗಳೊಂದಿಗೆ ಉಕ್ರೇನ್ ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಹಿಡಿಯುವುದನ್ನು ಮುಂದುವರಿಸಲು ಸಿದ್ಧವಿದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News