×
Ad

ಮೊರಾಕ್ಕೊಗೆ ಅಮೆರಿಕ ರಾಯಭಾರಿಯಾಗಿ ಭಾರತೀಯ ಮೂಲದ ಪುನೀತ್ ತಲ್ವಾರ್

Update: 2022-03-19 07:29 IST
(ಪುನೀತ್ ತಲ್ವಾರ್)

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಭಾರತೀಯ ಮೂಲದ ಪುನೀತ್ ತಲ್ವಾರ್ ಅವರನ್ನು ಮೊರಾಕ್ಕೊ ದೇಶಕ್ಕೆ ಅಮೆರಿಕ ರಾಯಭಾರಿಯಾಗಿ ನೇಮಕ ಮಾಡಿದ್ದಾರೆ.

ಇತರ ಕೆಲ ಪ್ರಮುಖ ನೇಮಕಾತಿಗಳನ್ನು ಬೈಡನ್ ಆಡಳಿತ ಮಾಡಿದ್ದು, ಟ್ರಿನಿಡಾಡ್ ಹಾಗೂ ಟೊಬಾಗೊಗೆ ಕಂಡೇಸ್ ಬಾಂಡ್, ಕತರ್ ಗೆ ಟಿಮ್ಮಿ ಡೇವಿಸ್ ಅವರನ್ನು ರಾಯಭಾರಿಗಳನ್ನಾಗಿ ನೇಮಿಸಲಾಗಿದೆ. ಸೆಕೆಂಡರಿ ನಂತರದ ಶಿಕ್ಷಣಕ್ಕೆ ಸಹಾಯಕ ಕಾರ್ಯದರ್ಶಿಯಾಗಿ ನಸ್ಸೇರ್ ಪೈದರ್ ಮತ್ತು ರಾಷ್ಟ್ರೀಯ ಕಲಾ ಮಂಡಳಿಗೆ ಸದಸ್ಯರಾಗಿ ಮೈಕೆಲ್ ಲೊಬಾರ್ಡೊ ಅವರನ್ನು ನೇಮಿಸಲಾಗಿದೆ.

ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಇಲಾಖೆಗಳಲ್ಲಿ ಉನ್ನತ ಹುದ್ದೆಗಳನ್ನು ಪುನೀತ್ ತಲ್ವಾರ್ ನಿಭಾಯಿಸಿದ್ದರು. ಇದರ ಜತೆಗೆ ರಕ್ಷಣಾ ಇಲಾಖೆ, ಶ್ವೇತಭವನ ಹಾಗೂ ಅಮೆರಿಕ ಸೆನೆಟ್‍ನಲ್ಲೂ ಉನ್ನತ ಹುದ್ದೆಗಳಲ್ಲಿದ್ದರು. ಪ್ರಸ್ತುತ ಅವರು ರಕ್ಷಣಾ ಇಲಾಖೆಯ ಹಿರಿಯ ಸಲಹೆಗಾರರಾಗಿದ್ದಾರೆ.

ಇದಕ್ಕೂ ಮುನ್ನ ಅವರು, ರಾಜಕೀಯ ಹಾಗೂ ಮಿಲಿಟರಿ ವ್ಯವಹಾರಗಳ ಸಹಾಯಕ ಕಾರ್ಯದರ್ಶಿಯಾಗಿ, ಅಧ್ಯಕ್ಷರ ವಿಶೇಷ ಸಹಾಯಕರಾಗಿ, ರಾಷ್ಟ್ರೀಯ ಭದ್ರತಾ ಮಂಡಳಿಯ ಹಿರಿಯ ನಿರ್ದೇಶಕರಾಗಿ ಮತ್ತು ಅಮೆರಿಕ ಸೆನೆಟ್‍ನ ವಿದೇಶಾಂಗ ಸಂಬಂಧಗಳ ಸಮಿತಿಯ ಹಿರಿಯ ವೃತ್ತಿಪರ ಸಿಬ್ಬಂದಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು. ಅಮೆರಿಕದ ಜನಪ್ರತಿನಿಧಿ ಸಭೆ ಮತ್ತು ರಕ್ಷಣಾ ಇಲಾಖೆಯ ನೀತಿ ಯೋಜನಾ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು.

ಕಾರ್ನ್‍ವೆಲ್ ವಿವಿಯಿಂದ ಎಂಜಿನಿಯರಿಂಗ್‍ನಲ್ಲಿ ಬಿಎಸ್ ಪದವಿ ಪಡೆದ ಅವರು, ಕೊಲಂಬಿಯಾ ವಿವಿಯಿಂದ ಅಂತರರಾಷ್ಟ್ರೀಯ ವ್ಯವಹಾರಗಳ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ವಿದೇಶಾಂಗ ವ್ಯವಹಾರಗಳ ಮಂಡಳಿಯ ಸದಸ್ಯರಾಗಿರುವ ಅವರು, ವಾಷಿಂಗ್ಟನ್ ಡಿಸಿಯಲ್ಲಿ ಜನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News