"ಸ್ಟ್ಯಾನ್ ಸ್ವಾಮಿ ಅವರ ಸಾವು ಭಾರತದ ಮಾನವ ಹಕ್ಕು ಇತಿಹಾಸದಲ್ಲಿ ಯಾವತ್ತೂ ಕಪ್ಪು ಚುಕ್ಕೆಯಾಗಿರಲಿದೆ"
ಹೊಸದಿಲ್ಲಿ: ಆದಿವಾಸಿ ಹಕ್ಕುಗಳ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಅವರ ಸಾವು ಭಾರತದ ಮಾನವ ಹಕ್ಕುಗಳ ಇತಿಹಾಸದಲ್ಲಿ ಯಾವತ್ತೂ ಒಂದು ಕಪ್ಪು ಚುಕ್ಕೆಯಾಗಿ ಉಳಿಯಲಿದೆ ಎಂದು ಯುನೈಟೆಡ್ ನೇಷನ್ಸ್ ವರ್ಕಿಂಗ್ ಗ್ರೂಪ್ ಆನ್ ಆರ್ಬಿಟ್ರರಿ ಡಿಟೆನ್ಶನ್ ಹೇಳಿದೆ ಎಂದು scroll.in ವರದಿ ಮಾಡಿದೆ.
ಕಳೆದ ವರ್ಷದ ನವೆಂಬರ್ 16ರಂದು ತನ್ನ ಅಧಿವೇಶನದಲ್ಲಿ ಈ ಸಂಸ್ಥೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು ಅದು ಇತ್ತೀಚೆಗೆ ಬಹಿರಂಗಗೊಂಡಿದೆ.
ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆರೋಪ ಹೊತ್ತು ಬಂಧಿಸಲ್ಪಟ್ಟಿದ್ದ 84 ವರ್ಷದ ಸ್ವಾಮಿ ಅವರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ತಲೋಜ ಕಾರಾಗೃಹದಲ್ಲಿರುವಾಗ ಕೋವಿಡ್ ಸೋಂಕಿಗೂ ಒಳಗಾಗಿದ್ದರಲ್ಲದೆ ಕಸ್ಟಡಿಯಲ್ಲಿರುವಾಗಲೇ ಕಳೆದ ವರ್ಷದ ಜುಲೈ 5ರಂದು ಮೃತಪಟ್ಟಿದ್ದರು.
ತಪ್ಪಿಸಬಹುದಾಗಿದ್ದ ಸನ್ನಿವೇಶದಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಯುನೈಟೆಡ್ ನೇಷನ್ಸ್ ವರ್ಕಿಂಗ್ ಗ್ರೂಪ್ ಅಭಿಪ್ರಾಯ ಪಟ್ಟಿತಲ್ಲದೆ ಅವರ ಜಾಮೀನು ಅರ್ಜಿಗಳನ್ನು ಹೇಗೆ ಸತತವಾಗಿ ತಿರಸ್ಕರಿಸಲಾಗಿತ್ತು ಹಾಗೂ ವೈದ್ಯಕೀಯ ಸಹಾಯ ಕೋರಿ ಅವರು ಸಲ್ಲಿಸಿದ್ದ ಮನವಿಯನ್ನೂ ಆರಂಭಿಕ ಹಂತದಲ್ಲಿ ಹೇಗೆ ನಿರಾಕರಿಸಲಾಗಿತ್ತು ಎಂಬುದನ್ನು ಉಲ್ಲೇಖಿಸಿದೆ, ಅವರ ಮನವಿಯನ್ನು ಪುರಸ್ಕರಿಸಿದಾಗ ಅದಾಗಲೇ ತುಂಬಾ ತಡವಾಗಿತ್ತು ಎಂದು ಹೇಳಿದೆ.
ಪಾರ್ಕಿನ್ಸನ್ಸ್ ಕಾಯಿಲೆಯಿಂದ ಬಳಲುತ್ತಿದ್ದ ಸ್ವಾಮಿ ಅವರಿಗೆ ಸ್ಟ್ರಾ ಮತ್ತು ಸಿಪ್ಪರ್ ಕೂಡ ಸಾರ್ವಜನಿಕ ಆಕ್ರೋಶದ ನಂತರ ಒದಗಿಸಲಾಗಿತ್ತು, ಅವರನ್ನು ಮಾನವೀಯತೆಯಿಂದ ನೋಡಿಕೊಳ್ಳುವಂತಾಗಲು ಸಾರ್ವಜನಿಕರು ಒತ್ತಡ ಹೇರಬೇಕಾಯಿತು ಎಂಬುದು ಆತಂಕಕಾರಿ ಎಂದು ಸಂಸ್ಥೆ ಹೇಳಿದೆ.
"ಕ್ರಿಮಿನಲ್ ತನಿಖೆಗಳ ಎಲ್ಲಾ ಹಂತಗಳ ವೇಳೆ ಕಸ್ಟಡಿ-ರಹಿತ ಕ್ರಮಗಳಿಗೆ ಆದ್ಯತೆ ನೀಡಲು ಆಗ್ರಹಿಸಲಾಗಿತ್ತು ಆದರೆ ಇದನ್ನು ಸರಕಾರ ಮನ್ನಿಸದೇ ಇದ್ದುದರಿಂದ ಕಸ್ಟಡಿಯಲ್ಲಿಯೇ ಸ್ವಾಮಿ ಅವರು ಸಾಯುವಂತಾಗಿತ್ತು, ಇದನ್ನು ತಪ್ಪಿಸಬಹುದಾಗಿತ್ತು,'' ಎಂದು ಯುನೈಟೆಡ್ ನೇಷನ್ಸ್ ವರ್ಕಿಂಗ್ ಗ್ರೂಪ್ ಹೇಳಿದೆ.