ಆರಂಭದಲ್ಲಿ ರಾಜ್ಯದ 20 ಸಾವಿರ ಶಾಲೆಗಳಲ್ಲಿ ಎನ್‌ಇಪಿ ಜಾರಿ : ಸಚಿವ ಬಿ.ಸಿ. ನಾಗೇಶ್

Update: 2022-03-19 17:47 GMT

ಕಾರವಾರ, ಮಾ.19: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯ ಬಗ್ಗೆ ಗೊಂದಲದ ಅವಶ್ಯಕತೆಯಿಲ್ಲ. 20 ಸಾವಿರ ಶಾಲೆಗಳಲ್ಲಿ ಮಾತ್ರ ಮೊದಲು ಪ್ರಾರಂಭ ಮಾಡುತ್ತಿದ್ದೇವೆ. ಉಳಿದ ಶಾಲೆಗಳಲ್ಲಿ ಈಗ ಇದ್ದಂತೆ ಶಿಕ್ಷಣ ನಡೆಯುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ಗೋಕರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನಿರಂತರ ಶಿಕ್ಷಣ. ಕರ್ನಾಟಕದ ಶಿಕ್ಷಣದ ಪದ್ಧತಿಯಲ್ಲಿ ಇದರಿಂದ ತುಂಬಾ ವ್ಯತ್ಯಾಸ ಆಗುತ್ತದೆ ಎಂದೇನೂ ಭಾವಿಸುವುದು ಬೇಡ. ಈ ಹಿಂದೆಯೇ ನಾವು ನಲಿ- ಕಲಿ ಪದ್ಧತಿಯನ್ನು ಜಾರಿಗೆ ತಂದಿದ್ದೇವೆ. ಆದರೆ ಪಠ್ಯದಲ್ಲಿ ಸ್ವಲ್ಪ ವ್ಯತ್ಯಾಸ ಆಗುತ್ತದೆ. ಹೊಸ ವಿಚಾರಗಳು ಬರುತ್ತವೆ. ಸಂಖ್ಯಾ ಮತ್ತು ಸಾಕ್ಷರತೆಗೆ ತುಂಬಾ ಒತ್ತು ನೀಡುತ್ತಿದ್ದೇವೆ. 48 ಸಾವಿರ ಶಾಲೆಗಳು ನಮ್ಮಲ್ಲಿದ್ದರೂ ಮಕ್ಕಳ ಸಂಖ್ಯೆ ತುಂಬಾ ಕಡಿಮೆ ಇದೆ. ಹೀಗಾಗಿ ಎಲ್ಲೆಲ್ಲಿ ಮಕ್ಕಳಿದ್ದಾರೆಯೋ ಅಲ್ಲಿ ಮೊದಲು ಪ್ರಾರಂಭಿಸುತ್ತಿದ್ದೇವೆ. ನಂತರ ಎಲ್ಲಾ ಶಾಲೆಗಳಿಗೆ ಜಾರಿ ಮಾಡುತ್ತೇವೆ ಎಂದು ಹೇಳಿದರು.

ಇನ್ನು ಭಗವದ್ಗೀತೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಈಗಿನ ಶಿಕ್ಷಣದಲ್ಲಿ ನೈತಿಕ ಶಿಕ್ಷಣದ ಕೊರತೆ ಇದೆ ಎಂಬುವುದು ಎಲ್ಲ ಪೋಷಕರ ಅಭಿಪ್ರಾಯವಾಗಿದೆ. ಮುಖ್ಯಮಂತ್ರಿ ಸಲಹೆ ಮೇರೆಗೆ ನೈತಿಕ ಶಿಕ್ಷಣದ ಒಂದು ತರಗತಿ ಮಾಡುತ್ತೇವೆ. ನೈತಿಕ ಶಿಕ್ಷಣದಲ್ಲಿ ಏನೇನಿರಬೇಕೆಂಬುದನ್ನು ಶಿಕ್ಷಣ ತಜ್ಞರು ನಿರ್ಧಾರ ಮಾಡಲಿದ್ದಾರೆ. ಪ್ರಪಂಚದಲ್ಲೆಲ್ಲಾ ಕಡೆ ಭಗವದ್ಗೀತೆಯನ್ನು ಒಪ್ಪಿಕೊಂಡಿದ್ದಾರೆ ಎಂದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಯವರನ್ನು ಬಿಜೆಪಿ ಸೇರ್ಪಡೆ ಮಾಡಿಕೊಳ್ಳಲು ಮಾತುಕತೆಗೆ ಇಲ್ಲಿಗೆ ಬಂದಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ನಾಗೇಶ್, ಇದು ರಾಜಕೀಯ ಸಮಾವೇಶವಲ್ಲ, ಶಿಕ್ಷಕರ ಸಮಾವೇಶ. ಬಸವರಾಜ ಹೊರಟ್ಟಿಯವರು ಈ ಸಂಘಟನೆಯ ಜೊತೆ ಬಹಳ ವರ್ಷಗಳಿಂದ ಸಂಪರ್ಕದಲ್ಲಿದ್ದಾರೆ. ನಾನು ಶಿಕ್ಷಣ ಸಚಿವನಾಗಿರುವ ಕಾರಣ ಈ ಸಮಾವೇಶಕ್ಕೆ ಬಂದಿದ್ದೇನೆ. ಬಿಜೆಪಿಯಲ್ಲಿ ಬಸವರಾಜ ಹೊರಟ್ಟಿಯವರಂತಹ ಹಿರಿಯರು ಬರುತ್ತಾರೆ ಎಂದಾದರೆ ಅದನ್ನು ಹಿರಿಯರು ನಿಶ್ಚಯ ಮಾಡುತ್ತಾರೆ. ನಾವೆಲ್ಲ ಬೆಳೆದಿರುವುದು ಸಂಘಟನೆಯಿಂದ. ಸಂಘಟನೆ ಏನೇ ಹೇಳಿದರೂ ಮಾಡುವಂತದ್ದೇ. ಹಿರಿಯರು, ಅನುಭವಿಗಳು ಬರುತ್ತಾರೆ ಎಂದಾಗ ಸಂಘಟನೆ ನಿಶ್ಚಯ ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News