ಸ್ಪುರದ್ರೂಪಿಯಾಗಿದ್ದಾನೆ ಎಂಬ ಕಾರಣಕ್ಕೆ ದಲಿತ ಯುವಕನ ಕೊಲೆ: ಆರೋಪ

Update: 2022-03-19 15:28 GMT
 ಜಿತೇಂದ್ರಪಾಲ್ ಮೇಘವಾಲ್ (Photo credit: thequint.com)

ಜೈಪುರ: ರಾಜಸ್ಥಾನದ ಪಾಲಿ ಜಿಲ್ಲೆಯ ಬರ್ವಾ ಗ್ರಾಮದಲ್ಲಿ ನಿವಾಸಿ ಜಿತೇಂದ್ರಪಾಲ್ ಮೇಘವಾಲ್ ಅವರನ್ನು ಮಾರ್ಚ್ 15 ರಂದು ಕ್ಷುಲ್ಲಕ ಕಾರಣಕ್ಕೆ ಕೊಲೆಗೀಡಾಗಿದ್ದಾರೆ. ಜಿತೇಂದ್ರ ಪಾಲ್‌ ಆಕರ್ಷಕ ನೋಟ ಮತ್ತು ಶೈಲಿಯನ್ನು ಹೊಂದಿರುವುದನ್ನು ಸಹಿಸದ ದುಷ್ಕರ್ಮಿಗಳು ಅಸೂಯೆಯಿಂದ ಕೊಲೆಗೈದಿದ್ದಾರೆ ಎಂದು ಅವರ ಕುಟುಂಬ ಆರೋಪಿಸಿದೆ ಎಂದು thequint.com ವರದಿ ಮಾಡಿದೆ.

ದಲಿತ ಸಮುದಾಯಕ್ಕೆ ಸೇರಿದ್ದ ಜಿತೇಂದ್ರಪಾಲ್‌ ಕೋವಿಡ್-19 ಆರೋಗ್ಯ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಆರೋಪಿಗಳಾದ ಸೂರಜ್ ಸಿಂಗ್ ಮತ್ತು ರಮೇಶ್ ಸಿಂಗ್ ಅವರನ್ನು ಗುರುವಾರ ಬಾರ್ಮರ್ ಜಿಲ್ಲೆಯ ದುಡ್ವಾ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ತನ್ನನ್ನು ಗೋಡ್ವಾಡ್ ರಾಜ ಎಂದು ಕರೆದುಕೊಂಡಿರುವ ಆರೋಪಿ ಸೂರಜ್ ಸಿಂಗ್, 2020ರಲ್ಲಿ ಸಣ್ಣ ವಿಚಾರಕ್ಕೆ ಪಾಲ್ ಮೇಲೆ ಹಲ್ಲೆ ನಡೆಸಿದ್ದ ಎಂದು ಆತನ ಸಹೋದರ ಓಂಪ್ರಕಾಶ್ ಹೇಳಿದ್ದಾರೆ. ಆರೋಪಿ ಸಿಂಗ್ ಗೆ ತನ್ನ ಸಹೋದರನ "ಆಕರ್ಷಕ ನೋಟ ಮತ್ತು ಸ್ಟೈಲ್‌” ಬಗ್ಗೆ ಅಸೂಯೆ ಹೊಂದಿದ್ದಾನೆ ಎಂದು ಗ್ರಾಮಸ್ಥರಿಗೆ ತಿಳಿದಿತ್ತು ಎಂದು ಅವರು ಹೇಳಿದ್ದಾರೆ. 

ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಪ್ರಕಾರ, ಜಿತೇಂದ್ರಪಾಲ್ ತನ್ನ ಸ್ನೇಹಿತ ಹರೀಶ್ ಕುಮಾರ್ ಜೊತೆ ಮಂಗಳವಾರ ಬಾಲಿಯಿಂದ ಬರ್ವಾಗೆ ಹೋಗುತ್ತಿದ್ದರು. ಜಿತೇಂದ್ರಪಾಲ್ ಮೋಟಾರ್ ಸೈಕಲ್ ನಲ್ಲಿ ಕುಮಾರ್ ಹಿಂದೆ ಕುಳಿತಿದ್ದರು. ಬಾಲಿಯಿಂದ ಎರಡು ಕಿಲೋಮೀಟರ್ ದೂರದಲ್ಲಿ ಬೈಕಿನಲ್ಲಿ ಬಂದ ಇಬ್ಬರು ಯುವಕರು ಇವರನ್ನು ತಡೆದು ನಿಲ್ಲಿಸಿದ್ದಾರೆ. ಹರೀಶ್ ಬೈಕಿನ ವೇಗ ಕಡಿಮೆ ಮಾಡಿದಾಗ ಒಬ್ಬಾತ ಜಿತೇಂದ್ರಪಾಲ್ ಬೆನ್ನಿಗೆ ಚೂರಿಯಿಂದ ಇರಿದಿದ್ದಾನೆ. ಗಾಯಗೊಂಡ ಅವರು ಕೆಳಗೆ ಬಿದ್ದಾಗ ಮತ್ತೆ ಹೊಟ್ಟೆ ಮತ್ತು ಎದೆಗೆ ಮತ್ತೆ ನಾಲ್ಕು ಬಾರಿ ಇರಿದಿದ್ದಾರೆ. ಆಸ್ಪತ್ರೆ ತಲುಪುವ ಮುನ್ನವೇ ಜಿತೇಂದ್ರ ಪಾಲ್ ಮೃತಪಟ್ಟಿದ್ದಾರೆ‌ ಎಂದು thequint.com ವರದಿ ಮಾಡಿದೆ.

ಇಬ್ಬರ ನಡುವೆ ಹಳೆ ವೈಷಮ್ಯವಿದ್ದು, ಈ ಹಿಂದೆಯೂ ಜಗಳ ನಡೆದಿತ್ತು ಎಂದು ಬಾಲಿ ಎಸ್‌ಎಚ್‌ಒ ದೇವೇಂದ್ರ ಸಿಂಗ್ ಹೇಳಿದ್ದಾರೆ.

ಸಂತ್ರಸ್ತ ಧರಿಸುತ್ತಿದ್ದ ಉಡುಪು ಹಾಗೂ ಆತನ ಸ್ಟೈಲ್‌ಗೂ ಕೊಲೆಗೂ ಸಂಬಂಧವಿಲ್ಲ ಎಂದು ರಾಜಸ್ಥಾನ ಪೊಲೀಸರು ಹೇಳಿದ್ದಾರೆ. 2020 ರಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದ ವೈಮನಸ್ಸಿನಿಂದ ಈ ಕೊಲೆಯಾಗಿದೆ ಎಂದು ಪೊಲೀಸ್‌ ಇಲಾಖೆ ಟ್ವಿಟರ್‌ನಲ್ಲಿ ಹೇಳಿದೆ.

ಜಿತೇಂದ್ರಪಾಲ್ ಹತ್ಯೆಯ ನಂತರ ಅವರ ಕುಟುಂಬ ಸದಸ್ಯರು ಪ್ರತಿಭಟನೆಯನ್ನು ಏರ್ಪಡಿಸಿದ್ದರು. ಪೊಲೀಸರು ಮತ್ತು ಆಡಳಿತವು ಕುಟುಂಬದ ಮನವೊಲಿಸಿದ ನಂತರ ಶುಕ್ರವಾರ ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ನೀಡಿದ್ದಾರೆ ಎಂದು ವರದಿಯಾಗಿದೆ.

ಸಂತ್ರಸ್ತೆಯ ಸಹೋದರನಿಗೆ ಸರ್ಕಾರಿ ನೌಕರಿ ಮತ್ತು ಅವರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರವನ್ನು ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ. ಬರ್ವಾ ಗ್ರಾಮದಲ್ಲಿ ಶಾಶ್ವತ ಪೊಲೀಸ್ ಚೌಕಿ ಬೇಡಿಕೆಯನ್ನು ಮುಖ್ಯಮಂತ್ರಿಗಳಿಗೆ ಮಂಡಿಸುವುದಾಗಿ ಭರವಸೆ ನೀಡಿದ್ದಾರೆ.

ಬಾಲಿ ಶಾಸಕ ಪುಷ್ಪೇಂದ್ರ ಸಿಂಗ್ ರಾಣಾವತ್ ಮತ್ತು ಮಾರ್ವಾರ್ ಜಂಕ್ಷನ್ ಶಾಸಕ ಖುಶ್ವೀರ್ ಸಿಂಗ್ ಜೋಜಾವರ್ ಅವರು ರಾಜಸ್ಥಾನ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದು, ಕುಟುಂಬದ ಸದಸ್ಯರಿಗೆ ಆರ್ಥಿಕ ನೆರವು ಹಾಗೂ ಸರ್ಕಾರಿ ಉದ್ಯೋಗ ಕಲ್ಪಿಸಿ ಆರೋಪಿಗಳನ್ನು ಶೀಘ್ರ ಬಂಧಿಸುವ ಕುರಿತು ಮಾತನಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News