ತನ್ನದೇ ಆದ ಮಂಗಳಯಾನ ಯೋಜನೆ ಆರಂಭಕ್ಕೆ ರಶ್ಯ ನಿರ್ಧಾರ
ಮಾಸ್ಕೋ, ಮಾ.19: ಉಕ್ರೇನ್ ಮೇಲೆ ಆಕ್ರಮಣ ಎಸಗಿದ ಕಾರಣಕ್ಕೆ ರಶ್ಯದ ಜತೆಗಿನ ಜಂಟಿ ಯೋಜನೆಯನ್ನು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ(ಇಎಸ್‌ಎ) ರದ್ದುಗೊಳಿಸಿದ ಹಿನ್ನೆಲೆಯಲ್ಲಿ ರಶ್ಯ ತನ್ನದೇ ಆದ ಮಂಗಳಯಾನ ಯೋಜನೆಯನ್ನು ಆರಂಭಿಸಲಿದೆ ಎಂದು ಉನ್ನತ ಮೂಲವನ್ನು ಉಲ್ಲೇಖಿಸಿ ಇಂಟರ್‌ಫ್ಯಾಕ್ಸ್ ಸುದ್ಧಿಸಂಸ್ಥೆ ಶುಕ್ರವಾರ ವರದಿ ಮಾಡಿದೆ.
ಎಕ್ಸೊಮಾರ್ಸ್ ಯೋಜನೆ(ಮಂಗಳನೆಡೆಗೆ ರಶ್ಯ-ಯುರೋಪ್ ಜಂಟಿ ಯೋಜನೆ)ಯಲ್ಲಿ ರಶ್ಯದ ಜತೆ ಸಹಕಾರ ಸಂಬಂಧ ಮುಂದುವರಿಸಲು ಸಾಧ್ಯವಿಲ್ಲ ಎಂದು ಇಎಸ್‌ಎ ಗುರುವಾರ ಹೇಳಿತ್ತು. ರಶ್ಯದ ರಾಕೆಟ್ ಮೂಲಕ ಯುರೋಪ್ ನಿರ್ಮಾಣದ ರೋವರ್ ಈ ವರ್ಷಾಂತ್ಯ ಮಂಗಳನೆಡೆಗೆ ಸಾಗುವ ಯೋಜನೆಯಿತ್ತು.
ಅತೀ ಶೀಘ್ರದಲ್ಲೇ ನಾವು ನಮ್ಮದೇ ಆದ ಮಂಗಳಯಾನ ಯೋಜನೆ ಆರಂಭಿಸಲಿದ್ದೇವೆ. ಈ ಯಾನಕ್ಕೆ ಪ್ರತ್ಯೇಕ ರೋವರ್‌ನ ಅಗತ್ಯ ಬರಲಾರದು. ಯಾಕೆಂದರೆ ರಶ್ಯದ ರಾಕೆಟ್ ಅನ್ನು ಮಂಗಳನಲ್ಲಿ ಇಳಿಯಲು ಸಾಧ್ಯವಾಗುವಂತೆ ನಿರ್ಮಿಸಲಾಗಿದ್ದು ಈ ರಾಕೆಟ್ ಅಲ್ಲಿ ವೈಜ್ಞಾನಿಕ ಸಂಶೋಧನೆ ಮುಂದುವರಿಸಲಿದೆ ಎಂದು ರಶ್ಯದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಸ್‌ನ ಮುಖ್ಯಸ್ಥ ಡಿಮಿಟ್ರಿ ರೆಗೊಝಿನ್ ಹೇಳಿದ್ದಾರೆ. ಆದರೆ ಇಎಸ್‌ಎ ಯೋಜನೆ ರಶ್ಯದ ಸಹಭಾಗಿತ್ವವಿಲ್ಲದೆ ಮುಂದುವರಿಯುವ ಬಗ್ಗೆ ಸಂದೇಹವಿದೆ, ಯಾಕೆಂದರೆ ರಶ್ಯದ ಬಳಿ ಈಗಾಗಲೇ ರಾಕೆಟ್, ಉಡಾವಣಾ ವ್ಯವಸ್ಥೆ ಹಾಗೂ ಮಂಗಳನಲ್ಲಿ ಇಳಿಯುವ ಸಾಧನವಿದೆ. ಇಂತಹ ಸಾಧನವನ್ನು ನಿರ್ಮಿಸಲು ಇಎಸ್‌ಎಗೆ ಕನಿಷ್ಟ 6 ವರ್ಷಗಳ ಅಗತ್ಯ ಬೀಳಬಹುದು ಎಂದವರು ಹೇಳಿದ್ದಾರೆ.
ರಶ್ಯ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಸ್‌ನ ವಿರುದ್ಧ ಅಮೆರಿಕ ನಿರ್ಬಂಧ ಜಾರಿಗೊಳಿಸಿರುವುದಕ್ಕೆ ಪ್ರತಿಯಾಗಿ ರೋಸ್ಕೋಸ್ಮನ್ ಅಮೆರಿಕಕ್ಕೆ ರಾಕೆಟ್ ಇಂಜಿನ್ ಪೂರೈಕೆಯನ್ನು ರದ್ದುಪಡಿಸಿದೆ ಮತ್ತು ಬಾಹ್ಯಾಕಾಶ ಯೋಜನೆಯಲ್ಲಿ ಯುರೋಪ್‌ನೊಂದಿಗೆ ಕಾರ್ಯನಿರ್ವಹಿಸುವುದನ್ನು ಅಮಾನತುಗೊಳಿಸಿದೆ ಎಂದು ರೆಗೊಝಿನ್ ಹೇಳಿದ್ದಾರೆ.