ನಾಗಾಲ್ಯಾಂಡ್‍ಗೆ 45 ವರ್ಷ ಬಳಿಕ ಮಹಿಳಾ ಸಂಸದೆ ?

Update: 2022-03-20 01:56 GMT
ಪಾಂಗ್‍ನಾನ್ ಕೊನ್ಯಾಕ್

ಕೋಹಿಮಾ: ನಲುವತ್ತೈದು ವರ್ಷದ ಬಳಿಕ ಮತ್ತೆ ಮಹಿಳಾ ಸದಸ್ಯೆಯೊಬ್ಬರನ್ನು ಸಂಸತ್ತಿಗೆ ಚುನಾಯಿಸಲು ನಾಗಾಲ್ಯಾಂಡ್ ಸಜ್ಜಾಗಿದೆ.

ಬಿಜೆಪಿ ಅಭ್ಯರ್ಥಿ ಎಸ್.ಪಾಂಗ್‍ನಾನ್ ಕೊನ್ಯಾಕ್ (44) ಅವರು ರಾಜ್ಯದಿಂದ ರಾಜ್ಯಸಭೆಯ ಏಕೈಕ ಸ್ಥಾನಕ್ಕೆ ಈ ತಿಂಗಳ 31ರಂದು ನಡೆಯುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿರುತ್ತಾರೆ. 1977ರಲ್ಲಿ ರಾನೊ ಎಂ ಶಾಯಿಝಾ ನಾಗಾಲ್ಯಾಂಡ್‍ನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.

ನಾಲ್ಕು ದಶಕಗಳ ಬಳಿಕ ಕೊನ್ಯಾಕ್ ಅವರ ಹೆಸರು ನಾಲ್ಕು ರಾಜ್ಯಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರಿದೆ. ಬಿಜೆಪಿ ಇಲ್ಲಿ ಆಡಳಿತಾರೂಢ ನ್ಯಾಷನಲ್ ಡೆಮಾಕ್ರಟಿಕ್ ಪ್ರೋಗ್ರಸ್ಸಿವ್ ಪಾರ್ಟಿಯ ಹಿರಿಯ ಪಾಲುದಾರ ಪಕ್ಷವಾಗಿದ್ದು, ಕೊನ್ಯಾಕ್ ಅವರ ವಿಜಯ ಬಹುತೇಕ ನಿಶ್ಚಿತ. ಈ ಬೆಳವಣಿಗೆ ನಾಗಾಲ್ಯಾಂಡ್ ಪಾಲಿಗೆ ಮಹತ್ವದ್ದಾಗಿದ್ದು, ರಾಜ್ಯದ ಸ್ಥಾನಮಾನ ದೊರಕಿ 58 ವರ್ಷ ಕಳೆದರೂ ಇದುವರೆಗೆ ರಾಜ್ಯ ವಿಧಾನಸಭೆಗೆ ಯಾವ ಮಹಿಳೆಯೂ ಆಯ್ಕೆಯಾಗಿಲ್ಲ ಎನ್ನುವುದು ಗಮನಾರ್ಹ.

ಮುಖ್ಯಮಂತ್ರಿ ನೀಪು ರಿಯೊ ಅವರು ಕೊನ್ಯಾಕ್ ಅವರನ್ನು ಶ್ಲಾಘಿಸಿದ್ದು, ಅವರನ್ನು ಆಯ್ಕೆ ಮಾಡಿರುವುದು ದೊಡ್ಡ ಹೆಜ್ಜೆ ಎಂದು ಬಣ್ಣಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕೊನ್ಯಾಕ್ ಬುಡಕಟ್ಟಿಗೆ ಸೇರಿರುವುದರಿಂದ, ಈ ಸಮುದಾಯವನ್ನು ಓಲೈಸುವ ಕ್ರಮ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಸಮುದಾಯಕ್ಕೆ ಸೇರಿದ 14 ಮಂದಿ ಕಳೆದ ವರ್ಷದ ಡಿಸೆಂಬರ್‍ನಲ್ಲಿ ಮಾನ್ ಜಿಲ್ಲೆಯಲ್ಲಿ ಭದ್ರತಾ ಪಡೆ ಸಿಬ್ಬಂದಿಯಿಂದ ಹತ್ಯೆಯಾಗಿದ್ದರು.

ಆದರೆ ಈ ಅಂಶ ಪರಿಗಣಿಸುವಂಥದ್ದಲ್ಲ. ಕೊನ್ಯಾಕ್ ಅವರು ರಾಜ್ಯ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷರಾಗಿದ್ದು, ತಮ್ಮ ಸ್ವ ಸಾಮರ್ಥ್ಯದಿಂದ ಟಿಕೆಟ್‍ಗೆ ಅರ್ಹ ಅಭ್ಯರ್ಥಿ ಎಂದು ರಿಯೊ ಬಣ್ಣಿಸಿದ್ದಾರೆ. 10 ಮಂದಿ ಆಕಾಂಕ್ಷಿಗಳಿದ್ದರು. ಆದರೆ ಅಂತಿಮವಾಗಿ ಕೊನ್ಯಾಕ್ ಅವರೇ ಸೂಕ್ತ ಅಭ್ಯರ್ಥಿ ಎಂಬ ನಿರ್ಧಾರಕ್ಕೆ ಬರಲಾಯಿತು ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News