×
Ad

ʼಕಾಶ್ಮೀರ ಫೈಲ್ಸ್ʼ ಟೀಕಿಸಿದ ಐಎಎಸ್ ಅಧಿಕಾರಿ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ

Update: 2022-03-20 07:49 IST

ಭೋಪಾಲ್: ವಿವಾದಾತ್ಮಕ ಚಿತ್ರ 'ಕಾಶ್ಮೀರ್ ಫೈಲ್ಸ್' ಟೀಕಿಸಿ ಟ್ವೀಟ್ ಮಾಡಿದ ಮಧ್ಯಪ್ರದೇಶ ಕೇಡರ್ ಐಎಎಸ್ ಅಧಿಕಾರಿ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹಿಸಿದೆ.

"ಕಾಶ್ಮೀರ್ ಫೈಲ್ಸ್ ಬ್ರಾಹ್ಮಣರ ನೋವನ್ನು ಬಿಂಬಿಸಿದೆ. ಅವರಿಗೆ ಕಾಶ್ಮೀರದಲ್ಲಿ ಗೌರವಯುತವಾಗಿ ಮತ್ತು ಸುರಕ್ಷಿತವಾಗಿ ಬದುಕಲು ಅವಕಾಶ ನೀಡಬೇಕು. ಚಿತ್ರ ನಿರ್ಮಾಪಕರು ದೇಶದ ವಿವಿಧ ರಾಜ್ಯಗಳಲ್ಲಿ ದೊಡ್ಡ ಸಂಖ್ಯೆಯ ಮುಸ್ಲಿಮರನ್ನು ಹತ್ಯೆ ಮಾಡಿರುವ ಬಗ್ಗೆಯೂ ಚಿತ್ರ ತಯಾರಿಸಬೇಕು. ಮುಸ್ಲಿಮರು ಕೀಟಗಳಲ್ಲ; ಅವರೂ ಮುನುಷ್ಯರು ಹಾಗೂ ದೇಶದ ಪ್ರಜೆಗಳು" ಎಂದು ಐಎಎಸ್ ಅಧಿಕಾರಿ ನಿಯಾಝ್ ಖಾನ್ ಟ್ವೀಟ್ ಮಾಡಿದ್ದರು.‌

"ಸಮಾಜದ ಹಿಂಸಾತ್ಮಕ ವಿಭಾಗವೊಂದು ಸತ್ಯವನ್ನು ಕೇಳಿಸಿಕೊಳ್ಳದಂತೆ ಕಿವಿ ಮುಚ್ಚಿಕೊಂಡಿದೆ. ಸುಶಿಕ್ಷಿತರು ಎನಿಸಿಕೊಂಡವರು ಕೂಡಾ ಸತ್ಯವಂತರನ್ನು ನಿಂದಿಸಲು ಕೀಳು ಭಾಷೆ ಬಳಸುತ್ತಿದ್ದಾರೆ. ಸರಿಯಾಗಿ ಬೆಳೆಸದೇ ಇರುವುದು ಮತ್ತು ಮೂಲಭೂತವಾದಿಗಳ ಕಂಪನಿ ಅವರ ತಲೆ ತಿನ್ನುತ್ತಿದೆ. ಕೀಳುಭಾಷೆ ಬಳಸುತ್ತಿರುವುದು ಅವರ ಮನಸ್ಥಿತಿಯನ್ನು ಸೂಚಿಸುತ್ತದೆ" ಎಂದು ವಿವರಿಸಿದ್ದರು.

ಏಳು ಕೃತಿಗಳನ್ನು ಬರೆಯುವ ಮೂಲಕ ಉತ್ತಮ ಲೇಖಕರು ಎನಿಸಿಕೊಂಡಿರುವ ಖಾನ್ ಅವರ 'ಲವ್ ಡಿಮಾಂಡ್ಸ್ ಬ್ಲಡ್' ಜನಪ್ರಿಯ ಕಾದಂಬರಿ. ಅಂಡರ್‌ ವಲ್ಡ್ ಡಾನ್ ಅಬು ಸಲೇಮ್ ಮತ್ತು ಮೋನಿಯಾ ಬೇಡಿಯವರ ಪ್ರಣಯದಿಂದ ಪ್ರೇರಿತವಾದ ಕೃತಿ ಇದಾಗಿದೆ. "ವಿವಿಧ ಸಂದರ್ಭಗಳಲ್ಲಿ ಮುಸ್ಲಿಮರ ಹತ್ಯಾಕಾಂಡವನ್ನು ಬಿಂಬಿಸುವ ಕೃತಿ ಬರೆಯುವ ಬಗ್ಗೆ ಚಿಂತನೆ ನಡೆಸಿದ್ದೇನೆ. ಈ ಮೂಲಕ ಇತರ ನಿರ್ಮಾಪಕರು ಕಾಶ್ಮೀರ್ ಫೈಲ್ಸ್‍ನಂಥ ಚಿತ್ರ ತಯಾರಿಸಬಹುದು. ಹೀಗೆ ಅಲ್ಪಸಂಖ್ಯಾತರ ನೋವು ಹಾಗೂ ನರಳಿಕೆಗಳನ್ನು ಭಾರತೀಯರ ಮುಂದೆ ಬಿಂಬಿಸಬಹುದು" ಎಂದು ಟ್ವೀಟ್ ಮಾಡಿದ್ದಾರೆ.

ಪ್ರಸ್ತುತ ಖಾನ್ ಅವರು ಲೋಕೋಪಯೋಗಿ ಇಲಾಖೆಯಲ್ಲಿ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವುದಕ್ಕೆ ಹೆಸರುವಾಸಿಯಾಗಿರುವ ಅವರು, ಗುಣ ಜಿಲ್ಲೆಯಲ್ಲಿ 2017ರಲ್ಲಿ ಮುಕ್ತಿಧಾಮ ಕಟ್ಟಡ ನಿರ್ಮಾಣ ಹಗರಣವನ್ನು ಬಯಲಿಗೆಳೆದಿದ್ದರು.

ಏತನ್ಮಧ್ಯೆ ಆಡಳಿತಾರೂಢ ಬಿಜೆಪಿಯ ರಾಜ್ಯ ಕಾರ್ಯದರ್ಶಿ ರಜನೀಶ್ ಅಗರ್‍ವಾಲ್ ಹೇಳಿಕೆ ನೀಡಿ, ಖಾನ್ ಅವರ ಟೀಕೆಗಳು ಪ್ರಚಾರ ಪಡೆಯುವ ತಂತ್ರ ಎಂದು ಬಣ್ಣಿಸಿದ್ದಾರೆ. ಸರ್ಕಾರ ಇದನ್ನು ಗಮನಿಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News