ಉತ್ತರ ಪ್ರದೇಶ: ಅಮಿತ್ ಶಾ ಭೇಟಿಯಾದ ರಾಜ್ ಭರ್, ಎನ್‌ಡಿಎಗೆ ವಾಪಸಾಗುವ ಕುರಿತು ಚರ್ಚೆ?
ಲಕ್ನೋ/ಹೊಸದಿಲ್ಲಿ: ಸಮಾಜವಾದಿ ಪಕ್ಷದ ಮಿತ್ರ ಪಕ್ಷ ಹಾಗೂ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಒ.ಪಿ. ರಾಜ್‌ಭರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಇತರ ಬಿಜೆಪಿ ಸದಸ್ಯರನ್ನು ಶುಕ್ರವಾರ ದಿಲ್ಲಿಯಲ್ಲಿ ಭೇಟಿಯಾದ ನಂತರ ಅವರು ಸಮಾಜವಾದಿ ಪಕ್ಷದ ಜೊತೆಗೆ ಉಳಿದುಕೊಳ್ಳುತ್ತಾರೋ ಅಥವಾ ಪಕ್ಷಾಂತರವಾಗುತ್ತಾರೋ ಎಂಬ ಪ್ರಶ್ನೆಗಳು ರಾಜಕೀಯ ವಲಯಗಳಲ್ಲಿ ಕೇಳಲಾರಂಭಿಸಿದೆ.
ರಾಜ್‌ಭರ್ ಸಮುದಾಯದ ಪ್ರಭಾವಿ ಸದಸ್ಯ, ಎಸ್‌ಬಿಎಸ್‌ಪಿ ಮುಖ್ಯಸ್ಥರು ಹಾಗೂ ಅವರ ಪಕ್ಷವು 2017 ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮೈತ್ರಿಪಕ್ಷ 403 ಸ್ಥಾನಗಳಲ್ಲಿ 325 ಸ್ಥಾನಗಳನ್ನು ಗಳಿಸಿ ಪ್ರಚಂಡ ಬಹುಮತದಿಂದ ಗೆದ್ದಾಗ ಎನ್‌ಡಿಎ ಜೊತೆಗಿದ್ದರು. ರಾಜ್‌ಭರ್ 2019 ರ ಲೋಕಸಭಾ ಚುನಾವಣೆಗೆ ಸ್ವಲ್ಪ ಮೊದಲು ಬೇರ್ಪಟ್ಟರು ಹಾಗೂ 2022 ರ ಚುನಾವಣೆಗೆ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ಸೇರಿಕೊಂಡರು.
ರಾಜ್ ಭರ್ ದಿಲ್ಲಿಯಲ್ಲಿ ಶಾ ಹಾಗೂ ಇತರರನ್ನು ಭೇಟಿಯಾದರು ಎಂದು ರಾಜ್ ಭರ್ ಪಕ್ಷದವರು ದೃಢಪಡಿಸಿದರು. ಆದರೆ ಇದು "ಸೌಜನ್ಯದ ಭೇಟಿ" ಹಾಗೂ ಹೆಚ್ಚೇನೂ ಅಲ್ಲ ಎಂದು ಮೂಲಗಳು ತಿಳಿಸಿವೆ.
ಅಂತಹ ಯಾವುದೇ ಸಭೆಯನ್ನು ಸ್ವತಃ ರಾಜ್‌ಭರ್ ನಿರಾಕರಿಸಿದರು, ತಾನು ಎಸ್‌ಪಿಯಲ್ಲಿದ್ದೇನೆ ಮತ್ತು 2024 ರ ಲೋಕಸಭೆ ಚುನಾವಣೆಯಲ್ಲಿ ಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಆದರೆ ರಾಜ್‌ಭರ್ ಯು-ಟರ್ನ್ ತೆಗೆದುಕೊಂಡು ಉತ್ತರಪ್ರದೇಶದಲ್ಲಿ ಆದಿತ್ಯನಾಥ್ ಸರಕಾರವನ್ನು ಸೇರಬಹುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಇದು ಮಾರ್ಚ್ 25 ರಂದು ಯೋಗಿ ಮತ್ತು ಅವರ ಮಂತ್ರಿಗಳ ಪ್ರಮಾಣವಚನಕ್ಕೆ ಮುಂಚೆಯೇ ಅಥವಾ ನಂತರ ಸಂಭವಿಸುತ್ತದೆಯೇ ಎಂಬುದನ್ನು ಅವರು ಖಚಿತಪಡಿಸಿಲ್ಲ. ರಾಜ್ ಭರ್ ಅವರು ಶಾ ಅವರೊಂದಿಗೆ ಗಂಟೆಗಟ್ಟಲೆ ಸಭೆ ನಡೆಸಿದಾಗ ಬಿಜೆಪಿಯ ಯುಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಮತ್ತು ಯುಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಸುನಿಲ್ ಬನ್ಸಾಲ್ ಉಪಸ್ಥಿತರಿದ್ದರು ಎಂದು ಮೂಲಗಳು ತಿಳಿಸಿವೆ.
ರಾಜಕೀಯ ವೀಕ್ಷಕರ ಪ್ರಕಾರ, ರಾಜ್‌ಭರ್ ಅವರ ಎನ್‌ಡಿಎ ಪುನರಾಗಮನವು 2024 ರಲ್ಲಿ ಎಸ್‌ಪಿಗೆ ಹಾಗೂ ವಿಧಾನ ಪರಿಷತ್ತಿನ ಚುನಾವಣೆಗಳಲ್ಲಿ ದೊಡ್ಡ ಹಿನ್ನಡೆಯಾಗಲಿದೆ. ಇತ್ತೀಚಿನ ರಾಜ್ಯ ಚುನಾವಣೆಯಲ್ಲಿ, ಬಿಜೆಪಿ ಮತ್ತು ಮಿತ್ರಪಕ್ಷಗಳು ಐತಿಹಾಸಿಕ ಜನಾದೇಶವನ್ನು ಗೆದ್ದಿವೆ. ಆದರೆ ಅವರ ಸಂಖ್ಯೆ 273 ಕ್ಕೆ ಕುಸಿಯಿತು.