ಎಪ್ರಿಲ್‌ನಲ್ಲಿ ಭಾರತಕ್ಕೆ ಭೇಟಿ ನೀಡಲಿರುವ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್‌

Update: 2022-03-20 16:11 GMT
photo courtesy:twitter

ಜೆರುಸಲೇಂ, ಮಾ.20: ಆತ್ಮೀಯ ಮಿತ್ರ ಪ್ರಧಾನಿ ನರೇಂದ್ರ ಮೋದಿಯ ಆಹ್ವಾನದ ಮೇರೆಗೆ ಎಪ್ರಿಲ್ ಮೊದಲ ವಾರದಲ್ಲಿ ಭಾರತಕ್ಕೆ ಮೊದಲ ಅಧಿಕೃತ ಭೇಟಿ ನೀಡಲು ಕಾತರನಾಗಿದ್ದೇನೆ ಎಂದು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಹೇಳಿದ್ದಾರೆ.

ಭಾರತ-ಇಸ್ರೇಲ್ ರಾಜತಾಂತ್ರಿಕ ಸಂಬಂಧ ಸ್ಥಾಪನೆಯ 30ನೇ ವಾರ್ಷಿಕೋತ್ಸವದ ಸಂದರ್ಭ ಈ ಭೇಟಿ ನಡೆಯಲಿದೆ. ಭಾರತ-ಇಸ್ರೇಲ್ ಸಂಬಂಧವು ಪರಸ್ಪರ ಶ್ಲಾಘನೆ ಮತ್ತು ಅರ್ಥಪೂರ್ಣ ಸಹಯೋಗವನ್ನು ಆಧರಿಸಿದೆ. ಭಾರತ-ಇಸ್ರೇಲ್ ನಡುವಿನ ಸಂಬಂಧವನ್ನು ಮೋದಿ ಪುನರಾರಂಭಿಸಿದರು ಮತ್ತು ಇದಕ್ಕೆ ಐತಿಹಾಸಿಕ ಮಹತ್ವವಿದೆ. ಎರಡು ಅಪೂರ್ವ ಸಂಸ್ಕೃತಿ(ಭಾರತೀಯ ಸಂಸ್ಕೃತಿ ಮತ್ತು ಯೆಹೂದಿ ಸಂಸ್ಕೃತಿ)ಗಳ ನಡುವಿನ ಸಂಬಂಧ ತುಂಬಾ ಆಳವಾಗಿದೆ ಮತ್ತು ಅರ್ಥಪೂರ್ಣ ಸಹಭಾಗಿತ್ವವನ್ನು ಆಧರಿಸಿದೆ ಎಂದವರು ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ಭಾರತೀಯರಿಂದ ನಾವು ಕಲಿಯಬೇಕಿರುವ ಹಲವು ವಿಷಯಗಳಿವೆ. ನಾವಿಬ್ಬರು ಜತೆಯಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ, ಭದ್ರತೆ ಮತ್ತು ಸೈಬರ್ ಕ್ಷೇತ್ರ, ಕೃಷಿಯಿಂದ ಹವಾಮಾನ ಬದಲಾವಣೆ ಕ್ಷೇತ್ರದವರೆಗೆ ನಮ್ಮ ಸಹಕಾರ ಸಂಬಂಧವನ್ನು ವ್ಯಾಪಿಸಿಕೊಳ್ಳಲಿದ್ದೇವೆ ಎಂದು ನಫ್ತಾಲಿ ಬೆನೆಟ್ ಹೇಳಿದ್ದಾರೆ.
   
ಪ್ರಧಾನಿ ನಫ್ತಾಲಿ ಬೆನೆಟ್ ಅವರು ಭಾರತದ ಪ್ರಧಾನಿ ಮೋದಿಯವರ ಆಹ್ವಾನದ ಮೇರೆಗೆ ಎಪ್ರಿಲ್ 2ರಂದು ಭಾರತಕ್ಕೆ ಪ್ರಥಮ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ಇಸ್ರೇಲ್ ಪ್ರಧಾನಿಯ ಮಾಧ್ಯಮ ವಕ್ತಾರರ ಹೇಳಿಕೆ ತಿಳಿಸಿದೆ. ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಮೈತ್ರಿಯನ್ನು ಇನ್ನಷ್ಟು ವಿಸ್ತರಿಸುವ, ದ್ವಿಪಕ್ಷೀಯ ಸಂಬಂಧವನ್ನು ಸದೃಢಗೊಳಿಸುವ ಉದ್ದೇಶದ ಭೇಟಿ ಇದಾಗಿದೆ. ಬೆನೆಟ್ ಅವರು ಭಾರತದ ಪ್ರಧಾನಿ, ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಯೆಹೂದಿ ಮುಖಂಡರನ್ನು ಭೇಟಿಯಾಗುವ ಕಾರ್ಯಕ್ರಮವಿದೆ ಎಂದು ಹೇಳಿಕೆ ತಿಳಿಸಿದೆ.

ಎಪ್ರಿಲ್ 2ರಿಂದ 5ರವರೆಗೆ ಇಸ್ರೇಲ್ ಪ್ರಧಾನಿ ಭಾರತದಲ್ಲಿರುತ್ತಾರೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News