ಹಿಂಸಾಚಾರ ಅಂತ್ಯಗೊಳಿಸಿ ಪ್ರಜಾಪ್ರಭುತ್ವ ಮರುಸ್ಥಾಪಿಸಲು ಮ್ಯಾನ್ಮಾರ್‌ಗೆ ಭಾರತ ಆಗ್ರಹ

Update: 2022-03-20 16:25 GMT
photo courtesy:twitter/@p_jaikumar

ಹೊಸದಿಲ್ಲಿ, ಮಾ.20: ಮ್ಯಾನ್ಮಾರ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತ ಮತ್ತು ಜಪಾನ್, ಮ್ಯಾನ್ಮಾರ್ನಾದ್ಯಂತ ತಕ್ಷಣ ಹಿಂಸಾಚಾರವನ್ನು ಅಂತ್ಯಗೊಳಿಸಿ ಪ್ರಜಾಪ್ರಭುತ್ವದ ಹಾದಿಗೆ ಮರಳುವಂತೆ ಆಗ್ರಹಿಸಿವೆ.

ಅಲ್ಲದೆ ಮ್ಯಾನ್ಮಾರ್‌ನಲ್ಲಿನ ಎಲ್ಲಾ ರಾಜಕೀಯ ಬಂಧಿಗಳನ್ನೂ ಬಿಡುಗಡೆಗೊಳಿಸುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಕಿಷಿಡಾ ಫುಮಿಯೊ ಜಂಟಿ ಹೇಳಿಕೆಯಲ್ಲಿ ಮ್ಯಾನ್ಮಾರ್‌ಗೆ ಕರೆ ನೀಡಿದ್ದಾರೆ. ಮ್ಯಾನ್ಮಾರ್‌ ಬಿಕ್ಕಟ್ಟಿಗೆ ಪರಿಹಾರ ಹುಡುಕುವ ಆಸಿಯಾನ್(ಆಗ್ನೇಯ ಏಶ್ಯಾ ದೇಶಗಳ ಸಂಘಟನೆ) ಸಂಘಟನೆಯ ಪ್ರಯತ್ನಕ್ಕೆ ತಮ್ಮ ಬೆಂಬಲವನ್ನು ಉಭಯ ಮುಖಂಡರು ಮತ್ತೊಮ್ಮೆ ದೃಢಪಡಿಸಿದ್ದು ಮ್ಯಾನ್ಮಾರ್‌ ಕಗ್ಗಂಟನ್ನು ಬಿಡಿಸುವಲ್ಲಿ ಆಸಿಯಾನ್ ಸಂಘಟನೆಯ ಅಧ್ಯಕ್ಷ ದೇಶ ಕಂಬೋಡಿಯಾ ನಡೆಸುತ್ತಿರುವ ಪ್ರಯತ್ನವನ್ನು ಶ್ಲಾಘಿಸಿದರು. 

ಆಸಿಯಾನ್ ದೇಶಗಳು ಸೂಚಿಸಿರುವ 5 ಅಂಶಗಳ ಸೂತ್ರವನ್ನು ತಕ್ಷಣ ದೇಶದಲ್ಲಿ ಅನುಷ್ಟಾನಗೊಳಿಸುವಂತೆ ಮ್ಯಾನ್ಮಾರ್ ಆಡಳಿತವನ್ನು ಆಗ್ರಹಿಸಿದ್ದಾರೆ ಎಂದು ಜಂಟಿ ಹೇಳಿಕೆ ಉಲ್ಲೇಖಿಸಿದೆ.

ಮಾತುಕತೆಯ ಮೂಲಕ ಬಿಕ್ಕಟ್ಟು ಪರಿಹರಿಸುವುದು, ಮಾನವೀಯ ನೆರವಿನ ಉಪಕ್ರಮ, ತಕ್ಷಣ ಹಿಂಸಾಚಾರ ಅಂತ್ಯಗೊಳಿಸಲು ಕ್ರಮ ಕೈಗೊಳ್ಳುವುದು ಸೇರಿದಂತೆ ಐದು ಅಂಶಗಳ ಸೂತ್ರವನ್ನು ಕಳೆದ ವರ್ಷ ಆಸಿಯಾನ್ ದೇಶಗಳು ಮುಂದಿರಿಸಿವೆ. ಕಳೆದ ವರ್ಷದ ಫೆಬ್ರವರಿ 1ರಂದು ಮ್ಯಾನ್ಮಾರ್‌ನಲ್ಲಿ ಕ್ಷಿಪ್ರಕ್ರಾಂತಿ ನಡೆಸಿದ್ದ ಸೇನೆ ಆಡಳಿತವನ್ನು ಕೈವಶ ಮಾಡಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News