ರಷ್ಯಾಗೆ ನೆರವು ನೀಡಲು ಚೀನಾ ಮುಂದಾದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ: ಅಮೆರಿಕ ಎಚ್ಚರಿಕೆ

Update: 2022-03-21 04:46 GMT
ಅಮೆರಿಕ ಅಧ್ಯಕ್ಷ ಜೋ ಬೈಡನ್ (PTI)

ವಾಷಿಂಗ್ಟನ್: ರಷ್ಯಾಗೆ ನೆರವು ನೀಡಲು ಚೀನಾ ಮುಂದಾದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.

"ನಿರ್ಬಂಧಗಳಿಂದ ತಪ್ಪಿಸಿಕೊಳ್ಳಲು ರಷ್ಯಾಗೆ ಮಿಲಿಟರಿ ಅಥವಾ ಆರ್ಥಿಕ ಬೆಂಬಲವನ್ನು ನೀಡಲು ಚೀನಾ ಮುಂದಾದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ" ಎಂದು ಅಮೆರಿಕದ ಉನ್ನತ ರಾಜತಾಂತ್ರಿಕರು ಎಚ್ಚರಿಸಿದ್ದಾರೆ.

ಉಕ್ರೇನ್ ವಿರುದ್ಧ ದಾಳಿ ನಡೆಸುತ್ತಿರುವ ರಷ್ಯಾಗೆ ಚೀನಾ ಮಿಲಿಟರಿ ಮತ್ತು ಇತರ ನೆರವು ನೀಡಿದರೆ ಎದುರಿಸಬೇಕಾದ ಪರಿಣಾಮಗಳ ಬಗ್ಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಶನಿವಾರ ದೂರವಾಣಿ ಸಂಭಾಷಣೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ವಿವರಿಸಿದ್ದಾರೆ ಎಂದು ಶ್ವೇತಭವನ ಹೇಳಿದೆ.

ರಷ್ಯಾಗೆ ಚೀನಾ ನೆರವು ನೀಡುವುದನ್ನು ತಡೆಯಲು ಜೋ ಬೈಡನ್ ಸುದೀರ್ಘ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.

"ರಷ್ಯಾಗೆ ಆರ್ಥಿಕ ನಿರ್ಬಂಧಗಳಿಂದ ತಪ್ಪಿಸಿಕೊಳ್ಳಲು ಅನುವು ಮಾಡಿಕೊಡುವಂತಹ ಮಿಲಿಟರಿ ಮತ್ತು ಇತರ ನೆರವನ್ನು ಒದಗಿಸಲು ನಿರ್ಧರಿಸಿದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ" ಎಂಬ ನಮ್ಮ ನಿಲುವನ್ನು ಚೀನಾಗೆ ಮನವರಿಕೆ ಮಾಡಿಕೊಡಲಾಗಿದೆ. ಸಂಭಾಷಣೆಯು ಎರಡು ಗಂಟೆಗಳಷ್ಟು ದೀರ್ಘವಾಗಿತ್ತು. ನಾವು ನಮ್ಮ ನಿಲುವನ್ನು ಚೀನಿಯರಿಗೆ ಸ್ಪಷ್ಟಪಡಿಸಿದ್ದೇವೆ ಎಂದು ವಿಶ್ವಸಂಸ್ಥೆಯ ಅಮೆರಿಕದ ರಾಯಭಾರಿ ಲಿಂಡಾ ಥಾಮಸ್-ಗ್ರೀನ್‌ಫೀಲ್ಡ್ ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News