ಸರಕು ಸಾಗಣೆ ಹಡಗು ಮತ್ತು ಪ್ರಯಾಣಿಕರಿದ್ದ ಫೆರಿ ಢಿಕ್ಕಿ: ಕನಿಷ್ಠ 6 ಮಂದಿ ಮೃತ್ಯು
ಢಾಕಾ: ಪ್ರಯಾಣಿಕರಿದ್ದ ಸಣ್ಣ ದೋಣಿಯೊಂದು ಸರಕು ತುಂಬಿದ ಹಡಗಿನ ಅಡಿಯಲ್ಲಿ ಸಿಲುಕುವ ವೀಡಿಯೊವೊಂದು ಸಾಮಾಜಿಕ ತಾಣದಾದ್ಯಂತ ಹರಿದಾಡುತ್ತಿದೆ. ಬಾಂಗ್ಲಾದೇಶದ ಢಾಕಾದಲ್ಲಿ ಘಟನೆ ನಡೆದಿದ್ದು, ಕನಿಷ್ಠ ಆರಕ್ಕೂ ಹೆಚ್ಚು ಮಂದಿ ಮೃತಪಟ್ಟು, ಹಲವು ಮಂದಿ ನಾಪತ್ತೆಯಾಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಘಟನೆ ರವಿವಾರದಂದು ನಡೆದಿದೆ ಎಂದು ತಿಳಿದು ಬಂದಿದೆ.
ರಾಜಧಾನಿ ಢಾಕಾ ಬಳಿಯ ಶೀತಲಕ್ಷ್ಯ ನದಿಯಲ್ಲಿ ಎಂವಿ ರೂಪೋಶಿ-9 ಒಳನಾಡಿನ ಸರಕು ಸಾಗಣೆ ನೌಕೆ ಮತ್ತು ಎಂವಿ ಅಫ್ಸರುದ್ದೀನ್ ಫೆರಿ ನಡುವೆ ಈ ಘಟನೆ ನಡೆದಿದೆ. ದೋಣಿಯಲ್ಲಿ ಎಷ್ಟು ಮಂದಿ ಇದ್ದರು ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಅಗ್ನಿಶಾಮಕ ಸೇವೆಯ ಅಧಿಕಾರಿ ರೋಜಿನಾ ಅಖ್ತರ್ ಹೇಳಿದ್ದಾರೆ.
ಭಾನುವಾರ ಢಾಕಾದ ಹೊರಭಾಗದಲ್ಲಿರುವ ನಾರಾಯಣಗಂಜ್‌ನಲ್ಲಿ ದುರ್ಘಟನೆ ಸಂಭವಿಸಿದಾಗ ದೋಣಿಯಲ್ಲಿ 30 ರಿಂದ 50 ಜನರು ಇದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಅಗ್ನಿಶಾಮಕ ಸೇವೆ ಮತ್ತು ನಾಗರಿಕ ರಕ್ಷಣಾ ವಿಭಾಗದ ರಕ್ಷಣಾ ಕಾರ್ಯಕರ್ತರು ನೀರಿನಲ್ಲಿ ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷನ ಮೃತದೇಹಗಳನ್ನು ಪತ್ತೆ ಮಾಡಿದರು. ಇನ್ನೋರ್ವ ಸಂತ್ರಸ್ತೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಮಂದಿ ಈಜಿ ದಡ ಸೇರಿದ್ದಾರೆ ಎಂದು ವರದಿಯಾಗಿದೆ.
ಸ್ಥಳೀಯ ಮಾಧ್ಯಮಗಳು ಪ್ರಸಾರ ಮಾಡಿದ ದೃಶ್ಯಾವಳಿಗಳು ದೋಣಿ ಮುಳುಗುತ್ತಿದ್ದಂತೆ ಜನರು ಕೂಗುತ್ತಾ ನೀರಿಗೆ ಹಾರುತ್ತಿರುವುದನ್ನು ತೋರಿಸಿದೆ. ಕೋಸ್ಟ್ ಗಾರ್ಡ್ ಸಿಬ್ಬಂದಿ ಮತ್ತು ಡೈವರ್‌ಗಳು ರಕ್ಷಣಾ ಕಾರ್ಯದಲ್ಲಿ ಸಹಾಯ ಮಾಡುತ್ತಿದ್ದಾರೆ ಎಂದು ಜಿಲ್ಲಾ ಆಡಳಿತಾಧಿಕಾರಿ ಮೊಂಜುರುಲ್ ಹಫೀಜ್ ತಿಳಿಸಿದ್ದಾರೆ.