ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಅವ್ಯವಹಾರದ ಕುರಿತು ವರದಿ ಮಾಡಿದ ಪತ್ರಕರ್ತನ ಬಂಧನ: ಎಡಿಟರ್ಸ್ ಗಿಲ್ಡ್ ಕಳವಳ

Update: 2022-03-21 13:55 GMT

ಆಗ್ರಾ: ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ವೇಳೆ ಅವ್ಯವಹಾರಗಳು ನಡೆದಿವೆ ಎಂದು ಆರೋಪಿಸಿ ವರದಿ ಮಾಡಿದ್ದಕ್ಕೆ  ಮಾರ್ಚ್ 15ರಂದು  ಪೊಲೀಸರಿಂದ ಬಂಧಿಸಲ್ಪಟ್ಟ ಆಗ್ರಾ ಪತ್ರಕರ್ತ ಗೌರವ್ ಬನ್ಸಾಲ್ ಅವರ ಪ್ರಕರಣ ಕುರಿತಂತೆ ಕೋರ್ಟ್ ಉಸ್ತುವಾರಿಯಲ್ಲಿ ಸ್ವತಂತ್ರ ತನಿಖೆ ನಡೆಸಬೇಕೆಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಆಗ್ರಹಿಸಿದೆಯಲ್ಲದೆ ಅವರನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದೆ.

ಸೂಕ್ಷ್ಮ ವಿಚಾರಗಳ ಕುರಿತಂತೆ ಸ್ವತಂತ್ರವಾಗಿ ವರದಿಗಾರಿಕೆ ಮಾಡುವ ಪತ್ರಕರ್ತರನ್ನು ಬೆದರಿಸಲು ಕಾನೂನನ್ನು ಅಸ್ತ್ರವನ್ನಾಗಿಸುವ ಇಂತಹ ಪ್ರಕರಣಗಳ ಬಗ್ಗೆ ಎಡಿಟರ್ಸ್ ಗಿಲ್ಡ್ ಕಳವಳವನ್ನು ಹೊಂದಿದೆ ಎಂದು ಗಿಲ್ಡ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಗೌರವ್ ಬನ್ಸಾಲ್ ಅವರು ಹಿಂದಿ ಪತ್ರಿಕೆ ಪಂಜಾಬ್ ಕೇಸರಿಗೆ ಕೆಲಸ ಮಾಡುತ್ತಿದ್ದಾರೆ. ಅವರನ್ನು ಪೊಲೀಸರು ಕಸ್ಟಡಿಯಲ್ಲಿ ಹಿಂಸಿಸಿದ್ದಾರೆಂಬ ಆರೋಪಗಳ ಕುರಿತು ಎಡಿಟರ್ಸ್ ಗಿಲ್ಡ್ ಆತಂಕ ವ್ಯಕ್ತಪಡಿಸಿದೆ.

ಬನ್ಸಾಲ್ ಅವರಿಗೆ ಕಸ್ಟಡಿಯಲ್ಲಿ ಪೊಲೀಸರು ರಾತ್ರಿಯಿಡೀ ಥಳಿಸಿದ್ದರು ಎಂದು ಅವರ ವಕೀಲರಾದ ಆಧಾರ್ ಶರ್ಮ ಇತ್ತೀಚೆಗೆ ಆರೋಪಿಸಿದ್ದರು.

ಬನ್ಸಾಲ್ ಅವರು ಮಾರ್ಚ್ 8ರಂದು ಮತ ಎಣಿಕೆ ಕೇಂದ್ರವೊಂದಕ್ಕೆ ಹೋಗಿ ಇವಿಎಂಗಳನ್ನು ಚುನಾವಣೆ ವೇಳೆ ಬದಲಿಸಲಾಗುತ್ತಿತ್ತು ಎಂದು ಆರೋಪಿಸಿ  ಮತ ಎಣಿಕೆಗಿಂತ ಕೆಲ ದಿನಗಳ ಹಿಂದ ಗೊಂದಲ ಸೃಷ್ಟಿಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.

ಬನ್ಸಾಲ್ ಅವರ ಬಂಧನ ಖಂಡಿಸಿ ಹಾಗೂ ಅವರು ಕಸ್ಟಡಿಯಲ್ಲಿ ನಡುಗುತ್ತಿರುವ ವೀಡಿಯೋ ಪೋಸ್ಟ್ ಮಾಡಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಬಿಡುಗಡೆಗೆ ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News