ʼದಿ ಕಾಶ್ಮೀರ್ ಫೈಲ್ಸ್ʼ ಪ್ರಚಾರಕ್ಕಾಗಿ ಮಾಡಿದ ಸಿನಿಮಾ, ನಾನು ನೋಡುವುದಿಲ್ಲ: ಮಾಜಿ ಗುಪ್ತಚರ ಇಲಾಖೆ ಮುಖ್ಯಸ್ಥ

Update: 2022-03-22 11:20 GMT
Photo: NetworkKNT.com

 ಹೊಸದಿಲ್ಲಿ: "ದಿ ಕಾಶ್ಮೀರ್ ಫೈಲ್ಸ್ ಒಂದು ಪ್ರಚಾರದ ಚಲನಚಿತ್ರ, ಇಂತಹವುಗಳನ್ನು ನಾನು ವೀಕ್ಷಿಸುವುದಿಲ್ಲ" ಎಂದು ಖಡಾಖಂಡಿತವಾಗಿ ಹೇಳುತ್ತಾರೆ ರಾ (ರಿಸರ್ಚ್ ಎಂಡ್ ಅನಾಲಿಸಿಸ್ ವಿಂಗ್) ಇದರ ಮಾಜಿ ಮುಖ್ಯಸ್ಥ ಎ.ಎಸ್ ದುಲತ್.

"ಕಾಶ್ಮೀರಿ ಪಂಡಿತರನ್ನು ಟಾರ್ಗೆಟ್ ಮಾಡಲಾಗಿತ್ತು ಎಂಬ ಬಗ್ಗೆ ಸಂಶಯವಿಲ್ಲ. ಅವರಂತೆಯೇ ಹಲವು ಜನರನ್ನು ಟಾರ್ಗೆಟ್ ಮಾಡಲಾಗಿತ್ತು, ಮುಸ್ಲಿಮರನ್ನೂ ಟಾರ್ಗೆಟ್ ಮಾಡಲಾಗಿತ್ತು" ಎಂದು ಅವರು ಹೇಳಿದ್ದಾಗಿ networkknt ವರದಿ ಮಾಡಿದೆ.

1990ರಲ್ಲಿ ನಡೆದ ಹತ್ಯೆಗಳ ಬಳಿಕ ಕಾಶ್ಮೀರಿ ಪಂಡಿತರು ಬೇರೆಡೆಗೆ ಸ್ಥಳಾಂತರ ಹೊಂದಲು ಆರಂಭಿಸಿದ್ದರು. ಶ್ರೀಮಂತ ಕುಟುಂಬಗಳು ದಿಲ್ಲಿಗೆ ತೆರಳಿದರೆ, ಬಡವರು ಜಮ್ಮುವಿನಲ್ಲಿ ಆರಂಭಿಸಲಾದ ಶಿಬಿರಗಳಿಗೆ ತೆರಳಿದರು ಎಂದು ಅವರು ನೆನಪಿಸಿಕೊಂಡರು.

1989ರಲ್ಲಿ ಆಗಿನ ಗೃಹ ಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬೈಯ್ಯಾ ಸಯೀದ್ ಅವರ ಅಪಹರಣ ಮತ್ತು ಆಕೆಯ ಬಿಡುಗಡೆಗಾಗಿ ಐದು ಜೆಕೆಎಲ್‍ಎಫ್ ಉಗ್ರರ ಬಿಡುಗಡೆಯ ನಂತರ ಎಲ್ಲವೂ ಬದಲಾಯಿತು. ನಂತರ ಅಲ್ಲಿ ಬಹಳಷ್ಟು ರಕ್ತಪಾತವಾಗಿತ್ತು ಎಂದು ಆಗ ಕಾಶ್ಮೀರದಲ್ಲಿ ಗುಪ್ತಚರ ಬ್ಯುರೋ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ದುಲತ್ ಹೇಳುತ್ತಾರೆ.

ಕಾಶ್ಮೀರಿ ಪಂಡಿತರು ಅಸುರಕ್ಷತೆಯ ಭಾವನೆ ಹೊಂದಿದ್ದರು ಹಾಗೂ ಹಲವರು ರಾಜ್ಯವನ್ನು ತೊರೆದರು. ಕಾಶ್ಮೀರ ಬಿಟ್ಟು ತೆರಳುವಷ್ಟು ಆರ್ಥಿಕವಾಗಿ ಸಬಲರಾಗಿದ್ದ ಮುಸ್ಲಿಂ ಕುಟುಂಬಗಳೂ ದಿಲ್ಲಿ ಮುಂತಾದೆಡೆ ತೆರಳಿದರು. ಪಂಡಿತರಿಗಿಂತಲೂ ಹೆಚ್ಚು ಮುಸ್ಲಿಮರು ಕಾಶ್ಮಿರ ಬಿಟ್ಟು ತೆರಳಿದ್ದರು. ಹಲವರ ಹತ್ಯೆಯೂ ನಡೆದಿತ್ತು" ಎಂದು ಅವರು ಹೇಳುತ್ತಾರೆ.

ಕಾಶ್ಮೀರ ಕಣಿವೆಯಲ್ಲಿಯೇ ಉಳಿಯಲು ನಿರ್ಧರಿಸಿದ್ದ ಹಲವು ಪಂಡಿತರನ್ನು ಮುಸ್ಲಿಮರು  ರಕ್ಷಿಸಿದ್ದರು. 370ನೇ ವಿಧಿ ರದ್ದತಿ ನಂತರವೂ ಕಾಶ್ಮೀರಿ ಪಂಡಿತರನ್ನು ಟಾರ್ಗೆಟ್ ಮಾಡಲಾಗಿಲ್ಲ ಎಂದು ಅವರು ಹೇಳಿದರು. ಕಾಶ್ಮೀರಿ ಪಂಡಿತರ ಸಹಾಯಕ್ಕಾಗಿ ಸರಕಾರಗಳು ಬಾಯ್ಮಾತು ಬಿಟ್ಟು ಏನನ್ನೂ ಮಾಡಿಲ್ಲ, ಅವರನ್ನು ವಾಪಸ್ ಕರೆಸಿಕೊಳ್ಳಲು ಶ್ರಮವನ್ನೂ ಪಟ್ಟಿಲ್ಲ ಎಂದು ದುಲತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News