×
Ad

ಮಥುರಾ: ಗೋಮಾಂಸ ಸಾಗಣೆ ಶಂಕೆಯ ಮೇಲೆ ವ್ಯಕ್ತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿದ ದುಷ್ಕರ್ಮಿಗಳ ಗುಂಪು

Update: 2022-03-22 17:03 IST

ಮಥುರಾ: ಪ್ರಾಣಿಗಳ ಕಳೇಬರವನ್ನು ಸಾಗಿಸುತ್ತಿದ್ದ ಪಿಕಪ್ ವ್ಯಾನ್ ಚಾಲಕನ ಮೇಲೆ ಗ್ರಾಮಸ್ಥರ ಗುಂಪೊಂದು ರವಿವಾರ ರಾತ್ರಿ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.

ವರದಿಗಳ ಪ್ರಕಾರ, ವಾಹನದಲ್ಲಿ ಪ್ರಾಣಿಗಳ ಮೂಳೆಗಳು ಹಾಗೂ ಕಳೇಬರವನ್ನು  ಗುರುತಿಸಿದ ಗ್ರಾಮಸ್ಥರು ವಾಹನವನ್ನು ತಡೆದರು. ದನದ ಮಾಂಸವನ್ನು ಸಾಗಿಸುವ ಹಾಗೂ  ಗೋ ಕಳ್ಳಸಾಗಣೆ ಮಾಡುವ ಅನುಮಾನದ ಮೇಲೆ ಜನರ ಗುಂಪು ಚಾಲಕ 30 ರ ಹರೆಯದ ಮುಸ್ಲಿಂ ವ್ಯಕ್ತಿಯನ್ನು ಸೆರೆಹಿಡಿದು ಹಲ್ಲೆ ನಡೆಸಿತು. ಆದಾಗ್ಯೂ, ಈ ವಾಹನವು ಪ್ರಾಣಿಗಳ ಮೃತದೇಹಗಳನ್ನು ವಿಲೇವಾರಿ ಮಾಡುವ ಗ್ರಾಮ ಸ್ವಚ್ಛತಾ ಅಭಿಯಾನದ ಭಾಗವಾಗಿತ್ತು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ವಾಹನದಲ್ಲಿ ಯಾವುದೇ ಹಸುಗಳು ಅಥವಾ ಗೋಮಾಂಸವನ್ನು ಸಾಗಿಸಲಾಗುತ್ತಿರಲಿಲ್ಲ,ಥಳಿತಕ್ಕೊಳಗಾದ  ವ್ಯಕ್ತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ  ಗುಂಪೊಂದು ವ್ಯಕ್ತಿಯನ್ನು ನಿಂದಿಸಿ, ಹಲ್ಲೆ ಮಾಡುವುದನ್ನು ಆತನ ಅಂಗಿಯನ್ನು ಹರಿದು ಹಾಕುತಿರುವುದು ಕಂಡುಬಂದಿದೆ.

ವ್ಯಕ್ತಿ ತನ್ನನ್ನು ಬಿಟ್ಟುಬಿಡಿ ಎಂದು  ಬೇಡಿಕೊಳ್ಳುತ್ತಿರುವುದು  ವೀಡಿಯೊದಲ್ಲಿ ಕಂಡುಬಂದಿದೆ. ಆದರೆ ಜನರ ಗುಂಪು ಯಾವುದನ್ನೂಲೆಕ್ಕಿಸದೆ  ಚರ್ಮದ ಬೆಲ್ಟ್ನಿಂದ ಥಳಿಸಿದ್ದಾರೆ. ಒಬ್ಬ ವ್ಯಕ್ತಿ ಮಾತ್ರ ಮಧ್ಯಪ್ರವೇಶಿಸಿ ಹಲ್ಲೆಯನ್ನು ತಡೆಯಲು ಪ್ರಯತ್ನಿಸಿದ್ದಾನೆ. ಆದರೆ ಕೋಪಗೊಂಡ ಗ್ರಾಮಸ್ಥರು ಆತನನ್ನು ಪಕ್ಕಕ್ಕೆ ತಳ್ಳಿದ್ದಾರೆ.

"ಮಥುರಾದ ಗೋವರ್ಧನ ಪ್ರದೇಶದ ನಿವಾಸಿ ರಾಮೇಶ್ವರ ವಾಲ್ಮೀಕಿ ಅವರು ಪ್ರಾಣಿಗಳ ಕಳೇಬರಗಳನ್ನು ವಿಲೇವಾರಿ ಮಾಡಲು ಜಿಲ್ಲಾ ಪಂಚಾಯತ್ನಿಂದ ಪರವಾನಗಿ ಪಡೆದಿದ್ದಾರೆ ಎಂಬ ವಿಚಾರವನ್ನು ತಿಳಿದುಕೊಂಡಿದ್ದೇವೆ. ಅವರು ವಾಹನವನ್ನು ಮಥುರಾದಿಂದ ಹತ್ತಿರದ ಜಿಲ್ಲೆಗೆ ಕಳುಹಿಸಿದ್ದರು. ನಮ್ಮ ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಹಸುಗಳು ಅಥವಾ ಗೋಮಾಂಸ ವಾಹನದೊಳಗೆ ಪತ್ತೆಯಾಗಿಲ್ಲ. ಸಂತ್ರಸ್ತ ನೀಡಿದ ದೂರಿನ ಆಧಾರದ ಮೇಲೆ ನಾವು ಎಫ್ಐಆರ್ ದಾಖಲಿಸಿದ್ದೇವೆ" ಎಂದು ಪೊಲೀಸ್ ಅಧೀಕ್ಷಕ (ಮಥುರಾ) ಮಾರ್ತಾಂಡ್ ಪ್ರಕಾಶ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News