ಇಸ್ಲಾಮೋಫೋಬಿಯಾ ತಡೆಗೆ ಮುಸ್ಲಿಂ ದೇಶಗಳು ಏನನ್ನೂ ಮಾಡಲಿಲ್ಲ: ಪಾಕ್ ಪ್ರಧಾನಿ ಇಮ್ರಾನ್ ಖಾನ್

Update: 2022-03-22 14:58 GMT

 ಇಸ್ಲಮಾಬಾದ್, ಮಾ.22: 9/11ರ ಭಯೋತ್ಪಾದಕ ದಾಳಿಯ ಬಳಿಕ ಇಸ್ಲಾಮೋಫೋಬಿಯಾ ಬೆಳೆಯಿತು ಮತ್ತು ಅನಿಯಂತ್ರಿತವಾಗಿ ಹೋಯಿತು. ಇಸ್ಲಾಂ ಧರ್ಮವನ್ನು ಭಯೋತ್ಪಾದನೆಯೊಂದಿಗೆ ಸಮೀಕರಿಸಿದ ತಪ್ಪು ನಿರೂಪಣೆಯನ್ನು ಪರಿಶೀಲಿಸಲು ಮುಸ್ಲಿಂ ರಾಷ್ಟ್ರಗಳು ಏನನ್ನೂ ಮಾಡಲಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ಹೇಳಿದ್ದಾರೆ.

ಇಸ್ಲಾಮಾಬಾದಿನಲ್ಲಿ ನಡೆದ ಇಸ್ಲಾಮಿಕ್ ಸಹಕಾರ ಸಂಘಟನೆ(ಒಐಸಿ)ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇಸ್ಲಾಂ ವಿಧಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಮತ್ತು ನಂಬಿಕೆಗೆ ಭಯೋತ್ಪಾದನೆಯೊಂದಿಗೆ ಸಂಬಂಧವಿಲ್ಲ ಎಂದರು.

 ನನ್ನ ಜೀವನದ ಬಹಳಷ್ಟು ಅವಧಿಯನ್ನು ಇಂಗ್ಲೆಂಡಿನಲ್ಲಿ ಕಳೆದಿದ್ದೇನೆ. ಓರ್ವ ಅಂತರಾಷ್ಟ್ರೀಯ ಕ್ರೀಡಾಳುವಾಗಿ ಜಗತ್ತಿನಾದ್ಯಂತ ಪ್ರಯಾಣ ಮಾಡಿದ್ದೇನೆ. ಪಾಶ್ಚಿಮಾತ್ಯ ನಾಗರಿಕತೆಯನ್ನು ಬಹುತೇಕ ಜನರಿಗಿಂತ ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ. 9/11ರ ಬಳಿಕ ಇಸ್ಲಾಮೊಫೋಬಿಯಾ ಬೆಳೆಯುತ್ತಿರುವುದನ್ನು ಕಂಡಿದ್ದೇನೆ. ಈ ತಪ್ಪು ನಿರೂಪಣೆಯನ್ನು ತಡೆಯಲು ಮುಸ್ಲಿಂ ದೇಶಗಳು ಏನೂ ಕ್ರಮ ಕೈಗೊಳ್ಳದ ಕಾರಣ ಇದು ಬೆಳೆದಿದೆ ಎಂದು ಹೇಳಲು ವಿಷಾದವಾಗುತ್ತದೆ. ಯಾವುದೇ ಧರ್ಮಕ್ಕೂ ಭಯೋತ್ಪಾದನೆಗೂ ಸಂಬಂಧ ಇರಲು ಹೇಗೆ ಸಾಧ್ಯ? ಇಸ್ಲಾಂ ಅನ್ನು ಭಯೋತ್ಪಾದನೆಯೊಂದಿಗೆ ಹೇಗೆ ಸಮೀಕರಿಸಲಾಯಿತು? ಮತ್ತು ಸಮೀಕರಿಸಿದ ಮೇಲೆ ಸೌಮ್ಯವಾದಿಗಳು ಹಾಗೂ ತೀವ್ರವಾದಿ ಮುಸ್ಲಿಮರ ನಡುವಿನ ವ್ಯತ್ಯಾಸವನ್ನು ಅವರು(ಪಾಶ್ಚಿಮಾತ್ಯರು) ಹೇಗೆ ಅರ್ಥ ಮಾಡಿಕೊಳ್ಳುತ್ತಾರೆ? ಆದ್ದರಿಂದಲೇ ಈ ವ್ಯಕ್ತಿ ಸೀದಾ ಮಸೀದಿಗೆ ನುಗ್ಗಿ ಎಲ್ಲರ ಮೇಲೂ ಗುಂಡು ಹಾರಿಸುತ್ತಾನೆ ಎಂದು 2019ರಲ್ಲಿ ನ್ಯೂಝಿಲ್ಯಾಂಡ್‌ನ ಕ್ರೈಸ್ಟ್ ಚರ್ಚ್ ಮಸೀದಿಯಲ್ಲಿ ನಡೆದಿದ್ದ ಗುಂಡಿನ ದಾಳಿಯನ್ನು ಉಲ್ಲೇಖಿಸಿ ಇಮ್ರಾನ್ ಹೇಳಿದರು.

ದುರದೃಷ್ಟವಶಾತ್, ಏನು ನಡೆಯಬೇಕಿತ್ತೊ ಅದು ನಡೆಯಲಿಲ್ಲ. ಮುಸ್ಲಿಂ ದೇಶಗಳ ಮುಖ್ಯಸ್ಥರು ಈ ಬಗ್ಗೆ ಒಂದು ನಿಲುವು ತಳೆಯಬೇಕಿತ್ತು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಒಐಸಿಯ ವಿದೇಶ ವ್ಯವಹಾರ ಸಚಿವರ 48ನೇ ಅಧಿವೇಶನ ಮಂಗಳವಾರದಿಂದ ಇಸ್ಲಮಾಬಾದ್‌ನಲ್ಲಿ ಆರಂಭವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News