×
Ad

ಉಕ್ರೇನ್ ನಲ್ಲಿ ರಶ್ಯದ 10,000 ಯೋಧರ ಮೃತ್ಯು ವರದಿ ಪ್ರಕಟಿಸಿ, ಬಳಿಕ ತೆಗೆದು ಹಾಕಿದ ರಶ್ಯದ ವೆಬ್ ಸೈಟ್

Update: 2022-03-22 20:47 IST

ಮಾಸ್ಕೊ, ಮಾ.22: ಉಕ್ರೇನ್ ಯುದ್ಧದಲ್ಲಿ ರಶ್ಯವು ಸುಮಾರು 10,000 ಯೋಧರನ್ನು ಕಳೆದುಕೊಂಡಿದೆ ಎಂದು ರಶ್ಯ ಸರಕಾರದ ಪರವಾಗಿರುವ ವೆಬ್ ಸೈಟ್ ನಲ್ಲಿ ವರದಿ ಪ್ರಕಟವಾದ ಕೆಲವೇ ಕ್ಷಣಗಳಲ್ಲಿ ವರದಿಯನ್ನು ವೆಬ್ ಸೈಟ್ ನಿಂದ ತೆಗೆದರೂ ಆ ವೇಳೆಗಾಗಲೇ ವರದಿಯ ಸ್ಕ್ರೀನ್ ಶಾಟ್ ಇಂಟರ್‌ನೆಟ್‌ ನಲ್ಲಿ ವೈರಲ್ ಆಗಿದೆ.

 ಸರಕಾರದ ಪರ ಇರುವ ವೆಬ್ ಸೈಟ್ ಕೊಮ್ಸೊಮೊಲ್ಸ್‌ಕಯ ಪ್ರಾವ್ಡ ರವಿವಾರ ಪ್ರಕಟಿಸಿದ ಲೇಖನದಲ್ಲಿ ‘ ಉಕ್ರೇನ್‌ನಲ್ಲಿನ ಯುದ್ಧದಲ್ಲಿ ರಶ್ಯದ 15000ಕ್ಕೂ ಅಧಿಕ ಯೋಧರು ಹತರಾಗಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಹೇಳುತ್ತಿದ್ದಾರೆ. ಇದು ಸುಳ್ಳು. ಯುದ್ಧದಲ್ಲಿ ರಶ್ಯದ 9,861 ಯೋಧರು ಮೃತಪಟ್ಟಿದ್ದು 16,153 ಮಂದಿ ಗಾಯಗೊಂಡಿರುವುದಾಗಿ ರಕ್ಷಣಾ ಇಲಾಖೆಯ ಬಳಿ ಮಾಹಿತಿಯಿದೆ’ ಎಂದು ಉಲ್ಲೇಖಿಸಿತ್ತು. ಕೆಲವೇ ಕ್ಷಣಗಳಲ್ಲಿ ಈ ಲೇಖನವನ್ನು ಹಿಂಪಡೆದರೂ ಆ ವೇಳೆಗಾಗಲೇ ಅದು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಉಕ್ರೇನ್ ಪರ ಸಿಬಂದಿಯ ಕೃತ್ಯ ಇದಾಗಿದೆ ಎಂದು ಡೈಲಿ ಮೈಲ್ ವರದಿ ಮಾಡಿದೆ.

    ಬಳಿಕ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಸಂಸ್ಥೆ ಮತ್ತೊಂದು ವರದಿ ಪ್ರಕಟಿಸಿದ್ದು ಅದರಲ್ಲಿ ಯೋಧರ ಸಾವಿನ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಶ್ಯ ಪಡೆ ಸಕಾರಾತ್ಮಕ ಮುನ್ನಡೆ ಸಾಧಿಸಿದ್ದು ಉಕ್ರೇನ್ ರಾಷ್ಟ್ರೀಯವಾದಿಗಳ 2 ಟ್ಯಾಂಕ್‌ಗಳು, 3 ಪದಾತಿ ದಳದ ವಾಹನಗಳು, 6 ಮೋರ್ಟರ್ ಮತ್ತು ಫಿರಂಗಿ ತುಕಡಿಗಳನ್ನು ನಾಶಗೊಳಿಸಿ 80 ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಪ್ರತಿಪಾದಿಸಲಾಗಿದೆ.

ಮಾರ್ಚ್ 2ರವರೆಗೆ ಯುದ್ಧದಲ್ಲಿ 498 ಯೋಧರು ಮೃತಪಟ್ಟಿರುವುದಾಗಿ ರಶ್ಯ ಅಧಿಕೃತವಾಗಿ ಒಪ್ಪಿಕೊಂಡಿದೆ. ಆದರೆ ರಶ್ಯದ 7000ಕ್ಕೂ ಅಧಿಕ ಯೋಧರು ಮೃತಪಟ್ಟಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ಕಳೆದ ವಾರ ವರದಿ ಮಾಡಿತ್ತು. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಶ್ಯ 3 ಸಾವಿರದಿಂದ 10 ಸಾವಿರದಷ್ಟು ಯೋಧರನ್ನು ಕಳೆದುಕೊಂಡಿದೆ ಎಂದು ಸಿಎನ್ಎನ್ ಕೂಡಾ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News