29,000 ಅಡಿ ಎತ್ತರದಿಂದ ಏಕಾಏಕಿ ಪತನಗೊಂಡಿದ್ದ ಚೀನಾದ ವಿಮಾನ
ಬೀಜಿಂಗ್, ಮಾ.22: ಸೋಮವಾರ ಪತನಗೊಂಡಿದ್ದ ಚೀನಾ ಈಸ್ಟರ್ನ್ ಏರ್‌ಲೈನ್ಸ್‌ನ ಜೆಟ್ ವಿಮಾನ 29,000 ಅಡಿ ಎತ್ತರದಿಂದ ಏಕಾಏಕಿ ಲಂಬವಾಗಿ ನೆಲಕ್ಕುರುಳಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಅಸಹಜ ಕುಸಿತದ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 132 ಪ್ರಯಾಣಿಕರಲ್ಲಿ ಯಾರೊಬ್ಬರೂ ಬದುಕಿ ಉಳಿಯುವ ಸಾಧ್ಯತೆ ಕಡಿಮೆ ಎಂದು ಚೀನಾದ ನಾಗರಿಕ ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ. ಬಹುತೇಕ ವಿಮಾನ ದುರಂತದಲ್ಲಿ ಆಗಸದಲ್ಲಿ ಸಾಮಾನ್ಯ ಹಾರಾಟ ಮಟ್ಟದಲ್ಲಿರುವ ವಿಮಾನ ಕೆಳಮಟ್ಟಕ್ಕೆ ಕುಸಿಯುತ್ತದೆ. ಆದರೆ ಸೋಮವಾರ ಸಂಭವಿಸಿದ ದುರಂತದಲ್ಲಿ ಏಕಾಏಕಿ ವಿಮಾನ ಮೂತಿ ಕೆಳಗೆ ಇರುವ ರೀತಿಯಲ್ಲಿ ಲಂಬವಾಗಿ ಭೂಮಿಗೆ ಪತನಗೊಂಡಿರುವುದು ವಿಮಾನಯಾನ ತಜ್ಞರನ್ನು ಅಚ್ಚರಿ ಮತ್ತು ಗೊಂದಲದಲ್ಲಿ ಕೆಡವಿದೆ.
ಇದೊಂದು ಅಸಾಮಾನ್ಯ ವಿಷಯವಾಗಿದೆ. ಸಾಮಾನ್ಯವಾಗಿ ದುರಂತ ಸಂಭವಿಸಿದಾಗ ವಿಮಾನ ಈ ರೀತಿ ಪತನಗೊಳ್ಳುವುದಿಲ್ಲ ಎಂದು ವಾಯುಯಾನ ಸುರಕ್ಷಾ ಸಲಹಾ ತಜ್ಞ ಜಾನ್ ಕಾಕ್ಸ್ ಹೇಳಿದ್ದಾರೆ. ವಿಮಾನ ಈ ರೀತಿಯಲ್ಲಿ ತ್ವರಿತ ಮತ್ತು ಹಠಾತ್ ಪತನಗೊಳ್ಳಲು ಕಾರಣವೇನು ಎಂಬುದು ಅಪಘಾತಗೊಂಡ ವಿಮಾನದ ಬ್ಲ್ಯಾಕ್ ಬಾಕ್ಸ್ ಪರಿಶೀಲನೆಯಿಂದ ತಿಳಿಯಬಹುದು. ಬ್ಲ್ಯಾಕ್ ಬಾಕ್ಸ್ ಇನ್ನೂ ಪತ್ತೆಯಾಗಿಲ್ಲ . ಕೆಟ್ಟ ಹವಾಮಾನ, ಅಥವಾ ಎಂಜಿನ್ ನಲ್ಲಿನ ದೋಷ, ಸಂಭಾವ್ಯ ದುಷ್ಕೃತ್ಯ ಹೀಗೆ ವಿವಿಧ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ ಎಂದು ಎಂದು ಅಧಿಕಾರಿಗಳು ಹೇಳಿದ್ದಾರೆ.