ಪಶ್ಚಿಮ ಬಂಗಾಳವು ಹಿಂಸಾಚಾರದ ಸಂಸ್ಕೃತಿ ಹಾಗೂ ಅರಾಜಕತೆಯ ಹಿಡಿತದಲ್ಲಿದೆ: ರಾಜ್ಯಪಾಲ ಹೇಳಿಕೆ

Update: 2022-03-22 15:30 GMT

       ಕೋಲ್ಕತಾ,ಮಾ.22: ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಸೋಮವಾರ ಭುಗಿಲೆದ್ದ ಹಿಂಸಾಚಾರವನ್ನು ಪಶ್ಚಿಮಬಂಗಾಳದ ರಾಜ್ಯಪಾಲ ಧನಕರ್ ಮಂಗಳವಾರ ಬಲವಾಗಿ ಖಂಡಿಸಿದ್ದಾರೆ. ‘ಅಲ್ಲಿ ಮಾನವಹಕ್ಕುಗಳ ನಾಶವಾಗಿದೆ ಹಾಗೂ ಕಾನೂನಿನ ಪ್ರಭುತ್ವಕ್ಕೆ ಗರಬಡಿದಿದೆ’ ಎಂದವರು ಕಳವಳ ವ್ಯಕ್ತಪಡಿಸಿದ್ದಾರೆ.

ಭಿರ್ಭೂಮ್ ಹಿಂಸಾಚಾರದಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ ರಾಜ್ಯಪಾಲರು ಪಶ್ಚಿಮಬಂಗಾಳವು ಹಿಂಸಾಚಾರದ ಸಂಸ್ಕೃತಿ ಹಾಗೂ ಅರಾಜಕತೆಯ ಹಿಡಿತದಲ್ಲಿದೆ ಎಂದರು. ಬಿರ್‌ಭೂಮ್‌ನ ರಾಮಪುರಹಾತ್‌ನಲ್ಲಿ ಟಿಎಂಸಿ ನಾಯಕ ಬಹಾದೂರ್ ಶೇಖ್ ಅವರ ಹತ್ಯೆಯ ಬಳಿಕ ಗುಂಪೊಂದು ಮನೆಗಳಿಗೆ ಬೆಂಕಿ ಹಚ್ಚಿದ ಘಟನೆಯಲ್ಲಿ ಎಂಟು ಮಂದಿ ಸಜೀವದಹನಗೊಂಡ ಭಯಾನಕ ಹಾಗೂ ಬರ್ಬರವಾದ ಘಟನೆಯು ತನಗೆ ನೋವುಂಟು ಮಾಡಿದೆ ಹಾಗೂ ವಿಚಲಿತಗೊಳಿಸಿದೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಬಿರ್‌ಭೂಮ್‌ನಲ್ಲಿ ಸಂಭವಿಸಿರುವ ಘಟನೆಯು ಭಯಾನಕ ಹಿಂಸಾಚಾರ ಹಾಗೂ ದಂಗೆಯ ಸ್ವೇಚ್ಛಾಚಾರವಾಗಿದೆ’’ ಎಂದು ಬಣ್ಣಿಸಿದರು. ಇಂತಹ ಹಿಂಸಾಚಾರ ಹಾಗೂ ಕಾನೂನುಭಂಜನೆಯ ಸಂಸ್ಕೃತಿಗೆ ಸರಕಾರವು ಅವಕಾಶ ನೀಡಕೂಡದು ಎಂದವರು ಕರೆ ನೀಡಿದ್ದಾರೆ.

  ಬಿರ್ಭೂಮ್ ಹಿಂಸಾಚಾರವು ಸರಕಾರದ ಕಾನೂನು ಮತ್ತು ಸುವ್ಯವಸ್ಥೆ ತಲೆಕೆಳಗಾಗಿರುವುದರ ಸೂಚನೆಯಾಗಿದೆ. ಸರಕಾರವು ಪಕ್ಷಪಾತದ ಧೋರಣೆಯನ್ನು ಮೀರಿ ನಿಲ್ಲಬೇಕಾಗಿದೆಯಾದರೂ, ವಾಸ್ತವಿಕವಾಗಿ ರಾಜ್ಯದಲ್ಲಿ ಅದು ಪ್ರತಿಫಲನಗೊಳ್ಳುತ್ತಿಲ್ಲವೆಂದು ಧನಕರ್ ವಿಷಾದ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News