ಜಿ-23 ಭಿನ್ನಮತೀಯ ನಾಯಕರನ್ನು ಭೇಟಿಯಾದ ಸೋನಿಯಾ ಗಾಂಧಿ

Update: 2022-03-22 18:07 GMT

ಹೊಸದಿಲ್ಲಿ, ಮಾ. 22: ಗುಲಾಮ್ ನಬಿ ಆಝಾದ್ ಅವರನ್ನು ಭೇಟಿಯಾದ ಕೆಲವು ದಿನಗಳ ಬಳಿಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಜಿ-23 ಗುಂಪಿನ ಇತರ ಕೆಲವು ನಾಯಕರೊಂದಿಗೆ ಮಂಗಳವಾರ ತಮ್ಮ ನಿವಾಸದಲ್ಲಿ ಚರ್ಚೆ ನಡೆಸಿದ್ದಾರೆ. ಜಿ-23 ಭಿನ್ನಮತೀಯ ಕಾಂಗ್ರೆಸ್ ನಾಯಕರ ಗುಂಪಾಗಿದ್ದು, ಅದು ಪಕ್ಷದ ಕುರಿತು ಕೂಲಂಕುಷ ಪರೀಕ್ಷೆಗೆ ಒತ್ತಾಯಿಸಿದೆ.

ಸೋನಿಯಾ ಗಾಂಧಿ ಅವರು ಭೇಟಿ ಮಾಡಿದ ನಾಯಕರಲ್ಲಿ ರಾಜ್ಯ ಸಭೆಯಲ್ಲಿ ಪಕ್ಷದ ಉಪ ನಾಯಕರಾಗಿರುವ ಆನಂದ್ ಶರ್ಮಾ ಹಾಗೂ ಲೋಕಸಭಾ ಸಂಸದ ಮನೀಶ್ ತಿವಾರಿ ಕೂಡ ಸೇರಿದ್ದಾರೆ. ಮುಂದಿನ ದಿನಗಳಲ್ಲಿ ಜಿ-23 ಗುಂಪಿನ ಇತರ ಕೆಲವು ನಾಯಕರನ್ನು ಕೂಡ ಸೋನಿಯಾ ಗಾಂಧಿ ಅವರು ಭೇಟಿಯಾಗುವ ಸಾಧ್ಯತೆ ಇದೆ. ಮತ್ತೊಂದೆಡೆ ಆಝಾದ್ ಅವರು ಗುಂಪಿನ ಇತರ ಕೆಲವು ನಾಯಕರನ್ನು ಭೇಟಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್ ನಾಯಕತ್ವ ಜಿ-23ರ ಸಲಹೆಗಳಿಗೆ ಮುಕ್ತವಾಗಿದೆ. ಅಲ್ಲದೆ, ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಹಾಗೂ ಪಕ್ಷವನ್ನು ಸಬಲೀಕರಿಸಲು ನಿರ್ಣಯ ರೂಪಿಸಲು ಪ್ರಯತ್ನಿಸುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News