ಕೋರ್ಸಿಕಾ: ಜೈಲಿನಲ್ಲಿ ಹಲ್ಲೆ ಪ್ರತ್ಯೇಕತಾವಾದಿ ಮುಖಂಡನ ಮೃತ್ಯು

Update: 2022-03-22 18:10 GMT

ಅಜಾಸಿಯೊ, ಮಾ.22: ಫ್ರಾನ್ಸ್ ಬಳಿಯ ಕೋರ್ಸಿಕ ದ್ವೀಪದ ಪ್ರತ್ಯೇಕತೆಗಾಗಿ ಹೋರಾಟ ನಡೆಸಿ ಫ್ರಾನ್ಸ್ ನಲ್ಲಿ ಬಂಧನದಲ್ಲಿದ್ದ ರಾಷ್ಟ್ರೀಯವಾದಿ ಯುವಾನ್ ಕೊಲೊನ್ನ ಜೈಲಿನಲ್ಲಿ ಸಹ ಖೈದಿಗಳ ಹಲ್ಲೆಯಿಂದ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಫ್ರಾನ್ಸ್ ಸರಕಾರ ಹೇಳಿದೆ.

  ಮೆಡಿಟರೇನಿಯನ್ ಸಮುದ್ರದಲ್ಲಿನ ದ್ವೀಪ ಕೋರ್ಸಿಕಾವು ಮೆಟ್ರೊಪಾಲಿಟನ್ ಫ್ರಾನ್ಸ್‌ನ 22 ವಲಯಗಳಲ್ಲಿ ಒಂದಾಗಿದೆ. ಕೋರ್ಸಿಕಾಕ್ಕೆ ಪ್ರತ್ಯೇಕ ರಾಷ್ಟ್ರದ ಸ್ಥಾನಮಾನ ದೊರಕಬೇಕೆಂಬ ಅಭಿಯಾನಕ್ಕೆ ಯುವಾನ್ ಕೊಲೊನ್ನ ನೇತೃತ್ವ ನೀಡಿದ್ದರು. ಅವರನ್ನು 1998ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿ ಫ್ರಾನ್ಸ್ ನ ಆರ್ಲೆಸ್ ನಗರದಲ್ಲಿನ ಜೈಲಿನಲ್ಲಿ ಇರಿಸಲಾಗಿತ್ತು. ಮಾರ್ಚ್ ಪ್ರಥಮ ವಾರದಲ್ಲಿ ಆವರ ಮೇಲೆ ಸಹಖೈದಿಗಳು ತೀವ್ರವಾಗಿ ಹಲ್ಲೆ ನಡೆಸಿದ್ದರಿಂದ ಅವರು ಕೋಮಾಕ್ಕೆ ಜಾರಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಫ್ರಾನ್ಸ್ ಸರಕಾರ ಸೋಮವಾರ ಹೇಳಿದೆ.

ಕೊಲೊನ್ನಾ ಸಾವನ್ನು ಖಂಡಿಸಿ ಕೋರ್ಸಿಕಾದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ಕೋರ್ಸಿಕಾದ ಎರಡು ನಗರಗಳಲ್ಲಿ ನಡೆದ ಶೃದ್ಧಾಂಜಲಿ ಸಭೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು . ಕೊಲೊನ್ನ ಸಾವಿನ ಪ್ರಕರಣದ ಬಗ್ಗೆ ಫ್ರಾನ್ಸ್ ಸರಕಾರ ತನಿಖೆಗೆ ಆದೇಶಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News