'ಕಾಶ್ಮೀರ್ ಫೈಲ್ಸ್' ಕುರಿತ ಟ್ವೀಟ್‍ಗಾಗಿ ಐಎಎಸ್ ಅಧಿಕಾರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಿರುವ ಮಧ್ಯಪ್ರದೇಶ ಸರಕಾರ

Update: 2022-03-23 17:25 GMT

ಭೋಪಾಲ,ಮಾ.23: ಇತ್ತೀಚಿಗೆ ಬಿಡುಗಡೆಗೊಂಡ ‘ದಿ ಕಾಶ್ಮೀರ ಫೈಲ್ಸ್’ ಚಿತ್ರದ ಕುರಿತು ವಿವಾದಾತ್ಮಕ ಟ್ವೀಟ್ ಗಳನ್ನು ಪೋಸ್ಟ್ ಮಾಡಿದ್ದ ಐಎಎಸ್ ಅಧಿಕಾರಿ ನಿಯಾಝ್ ಖಾನ್ ಅವರಿಗೆ ಮಧ್ಯಪ್ರದೇಶ ಸರಕಾರವು ನೋಟಿಸ್ ಅನ್ನು ಹೊರಡಿಸಲಿದೆ ಎಂದು ರಾಜ್ಯದ ಗೃಹಸಚಿವ ನರೋತ್ತಮ ಮಿಶ್ರಾ ಅವರು ಬುಧವಾರ ಇಲ್ಲಿ ತಿಳಿಸಿದರು.

ಮಧ್ಯಪ್ರದೇಶ ಲೋಕೋಪಯೋಗಿ ಇಲಾಖೆಯ ಉಪ ಕಾರ್ಯದರ್ಶಿಯಾಗಿರುವ ಖಾನ್ ಕಳೆದ ವಾರ ಟ್ವೀಟ್ ಒಂದರಲ್ಲಿ ಭಾರತದಾದ್ಯಂತ ಹಲವಾರು ರಾಜ್ಯಗಳಲ್ಲಿ ಮುಸ್ಲಿಮರ ಹತ್ಯೆಗಳ ಕುರಿತೂ ಚಿತ್ರವೊಂದನ್ನು ನಿರ್ಮಿಸುವಂತೆ ‘ದಿ ಕಾಶ್ಮೀರ್ ಫೈಲ್ಸ್’ ನಿರ್ಮಾಪಕರನ್ನು ಆಗ್ರಹಿಸಿದ್ದರು ಮತ್ತು ಈ ಅಲ್ಪಸಂಖ್ಯಾತ ಸಮುದಾಯದ ಜನರು ಕೀಟಗಳಲ್ಲ,ಆದರೆ ದೇಶದ ಪ್ರಜೆಗಳಾಗಿದ್ದಾರೆ ಎಂದು ಹೇಳಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಮಿಶ್ರಾ,ಖಾನ್ ಮಾಡಿದ್ದ ಟ್ವೀಟ್‌ಗಳನ್ನು ತಾನು ನೋಡಿದ್ದೇನೆ. ಸರಕಾರವು ಅಧಿಕಾರಿಗಳಿಗೆ ನಿಗದಿಗೊಳಿಸಿರುವ ಲಕ್ಷ್ಮಣ ರೇಖೆಯನ್ನು ಅವರು ದಾಟುತ್ತಿದ್ದಾರೆ. ಸರಕಾರವು ಅವರಿಗೆ ಶೋಕಾಸ್ ನೋಟಿಸನ್ನು ಜಾರಿಗೊಳಿಸಲಿದೆ ಮತ್ತು ಉತ್ತರವನ್ನು ಕೋರಲಿದೆ ಎಂದು ತಿಳಿಸಿದರು.

ಅಲ್ಪಸಂಖ್ಯಾತರ ನೋವು ಮತ್ತು ಬವಣೆಗಳನ್ನು ಭಾರತೀಯರ ಮುಂದಿರಿಸಲು ‘ದಿ ಕಾಶ್ಮೀರ ಫೈಲ್ಸ್’ನಂತಹ ಚಿತ್ರವನ್ನು ಯಾರಾದರೂ ನಿರ್ಮಿಸುವಂತಾಗಲು ಮುಸ್ಲಿಮರ ನರಮೇಧವನ್ನು ಮುಖ್ಯವಾಗಿಸಿಕೊಂಡು ಪುಸ್ತಕವೊಂದನ್ನು ಬರೆಯಲು ತಾನು ಯೋಜಿಸಿದ್ದೇನೆ ಎಂದು ಖಾನ್ ಹೇಳಿದ್ದರು.ಚಿತ್ರದಿಂದ ಲಭಿಸುವ ಸಂಪೂರ್ಣ ಲಾಭವನ್ನು ಕಾಶ್ಮೀರಿ ಪಂಡಿತರ ಮಕ್ಕಳ ಶಿಕ್ಷಣಕ್ಕಾಗಿ ಮತ್ತು ಕಾಶ್ಮೀರದಲ್ಲಿ ಅವರಿಗಾಗಿ ಮನೆಗಳನ್ನು ನಿರ್ಮಿಸಲು ವರ್ಗಾಯಿಸುವಂತೆಯೂ ಖಾನ್ ‘ದಿ ಕಾಶ್ಮೀರ ಫೈಲ್ಸ್’ ನಿರ್ಮಾಪಕರನ್ನು ಆಗ್ರಹಿಸಿದ್ದರು.

ಖಾನ್ ಟ್ವೀಟ್‌ಗಳು ವೈರಲ್ ಆದ ಬಳಿಕ ಚಿತ್ರದ ನಿರ್ದೇಶಕ ವಿವೇಕ ಅಗ್ನಿಹೋತ್ರಿ ಅವರು ವಿಚಾರ ವಿನಿಮಯಕ್ಕಾಗಿ ಖಾನ್ ಭೇಟಿಗಾಗಿ ಅವಕಾಶವನ್ನು ಕೋರಿದ್ದರು.
ಬಳಿಕ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಸಾರಂಗ್ ಅವರು,ಖಾನ್ ಪಂಥೀಯತೆಯ ಕುರಿತು ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದರಲ್ಲದೆ ತಾನು ಅವರ ವಿರುದ್ಧ ಸಿಬ್ಬಂದಿ ಇಲಾಖೆಗೆ ಪತ್ರವನ್ನು ಬರೆಯುವುದಾಗಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News