×
Ad

ಹಿಜಾಬ್‌ ನಿಷೇಧ ಪರಿಣಾಮ: ಉಡುಪಿಯ ತರಗತಿ ಕೊಠಡಿಗಳಿಂದ ಹೊರಗುಳಿದ 400ಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿನಿಯರು

Update: 2022-03-23 16:21 IST

ಮಧ್ಯಾಹ್ನ 12 ಗಂಟೆ, ತನ್ನ ಕಾಲೇಜು ಗೇಟಿನ ಎದುರು ನಿಂತಿರುವ ಅಫ್ಸಾನಳ ನೆತ್ತಿಯ ಮೇಲೆ ಸೂರ್ಯ ಸುಡುತ್ತಿದ್ದಾನೆ. ಮೂರನೇ ಪಿರಿಯಡ್‌ ನಡೆಯುತ್ತಿದೆ. ಕಿಟಕಿಯ ಮೂಲಕ ತನ್ನ ಸಹಪಾಠಿಗಳನ್ನು ಅಫ್ಸಾನ ನೋಡುತ್ತಿದ್ದಾಳೆ. ಅವರು ತರಗತಿಯಲ್ಲಿ ಸೈಕಾಲಜಿ ಪಾಠಗಳನ್ನು ಪುನರಾವರ್ತಿಸುತ್ತಿದ್ದಾರೆ. ಆದರೆ, 20 ರ ಹರೆಯದ ಅಫ್ಸಾನ ಪಿಯಾಜಿ ಹಾಗೂ ಆಕೆಯ ನಾಲ್ವರು ಸ್ನೇಹಿತೆಯರಿಗೆ ಹೊರಗಡೆಯಿಂದ ನೋಡಲು ಮಾತ್ರ ಸಾಧ್ಯವಾಗುತ್ತದೆ. “ಕಾಲೇಜಿನ ಇತರರಿಗೆ ತೊಂದರೆ ಉಂಟು ಮಾಡದೆ ಹೊರಗೆ ಹೋಗಲು ನಮ್ಮ ಪ್ರಿನ್ಸಿಪಾಲರು ಹೇಳಿದ್ದಾರೆ” ಎಂದು ಅಫ್ಸಾನ ಹೇಳುತ್ತಾಳೆ. ತರಗತಿಯಲ್ಲಿ ಹಿಜಾಬ್‌ ಧರಿಸಲು ನಿರಾಕರಿಸಲ್ಪಟ್ಟ ಕಾರಣ ಆಕೆ ಒಂದು ತಿಂಗಳಿನಿಂದಲೂ ತರಗತಿಯನ್ನು ಕಳೆದುಕೊಳ್ಳುತ್ತಿದ್ದಾಳೆ. 

ಕಳೆದ ವಾರ, ಕರ್ನಾಟಕ ಹೈಕೋರ್ಟ್‌ ಹಿಜಾಬ್‌ ಮೇಲಿನ ನಿಷೇಧವನ್ನು ಎತ್ತಿ ಹಿಡಿದು ತೀರ್ಪು ನೀಡಿದೆ. ಇದು ಅಫ್ಸಾನಳನ್ನು ಹೆಣಗಾಡುವಂತೆ ಮಾಡಿದೆ. “(ಈ ಸಮಸ್ಯೆಗೆ) ಏನಾದರೂ ಪರಿಹಾರ ಸಿಗಬಹುದೆಂಬ ಭರವಸೆಯಿಂದ ಕಾಲೇಜಿಗೆ ಬರುತ್ತಿದ್ದೇನೆ.. ಏನಾದರೂ ಪರಿಹಾರ (ಇರಲೇಬೇಕು). ನಾವು ನಮ್ಮ ಸೆಮಿಸ್ಟರ್‌ ಫೀಸ್‌ ರೂ. 730 ಅನ್ನು ಕಟ್ಟಿದ್ದೇವೆ. ಈ ಬಾರಿಯ  ಶೈಕ್ಷಣಿಕ ವರ್ಷವನ್ನು ಪೂರ್ಣಗೊಳಿಸಲು ಪ್ರಿನ್ಸಿಪಾಲ್‌ ನಮಗೆ ಸಹಾಯ ಮಾಡಿಯಾರು ಎಂದು ನಾನು ಭಾವಿಸಿದ್ದೇನೆ” ಎಂದು ಅಫ್ಸಾನ ಹೇಳುತ್ತಾಳೆ. 

ಮೂರು ವರ್ಷಗಳ ಹಿಂದೆ, ಅಫ್ಸಾನಾ ಉಡುಪಿಯ ಸರ್ಕಾರಿ ಅನುದಾನಿತ ಕಾಲೇಜಿನ ಜಿ ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೈಕಾಲಜಿ, ಪತ್ರಿಕೋದ್ಯಮ ಮತ್ತು ಗ್ರಾಮೀಣಾಭಿವೃದ್ಧಿ ಪದವಿ ಕೋರ್ಸ್‌ಗೆ ಸೇರಲು ನಿರ್ಧರಿಸಿದರು, ಮಣಿಪಾಲದ ಖಾಸಗಿ ಕಾಲೇಜಿನಲ್ಲಿ ಇದೇ ಕೋರ್ಸ್‌ ಅನ್ನು ಕಲಿಸಲು ಆಕೆಯ ಪೋಷಕರಿಗೆ ಕಷ್ಟವಾಗಿದ್ದರಿಂದ ಸರ್ಕಾರಿ ಕಾಲೇಜನ್ನು ಅಫ್ಸಾನ ಆಯ್ಕೆ ಮಾಡಿಕೊಂಡಿದ್ದಳು. ಆಕೆ ಸದ್ಯ, ತನ್ನ ಅಂತಿಮ ಸೆಮಿಸ್ಟರ್‌ ಪರೀಕ್ಷೆಗಳಿಗೆ ಬೇಕಾದ ತಯಾರಿ ಹಾಗೂ ಮುಂದಿನ ತನ್ನ ವೃತ್ತಿಜೀವನದ ಕಡೆಗೆ ಗಮನಹರಿಸಬೇಕಾಗಿತ್ತು. “ಇದಾದ ಬಳಿಕ ನಾನು ಮಾಸ್ಟರ್‌ ಡಿಗ್ರಿ ಮಾಡಬೇಕು ಎಂದು ಅಂದುಕೊಂಡಿದ್ದೆ, ಕಾಪು ಸರ್ಕಾರಿ ಕಾಲೇಜಿನಲ್ಲಿ ಸೋಶಿಯಲ್‌ ವರ್ಕ್‌ ಸ್ನಾತಕೋತ್ತರ ಪದವಿ ಮಾಡಬೇಕಿತ್ತು. ಆದರೆ, ಇನ್ನು ಅದು ಸಾಧ್ಯವಾಗುತ್ತೋ ಇಲ್ಲವೋ ಗೊತ್ತಿಲ್ಲ. ನನ್ನ ನಂಬಿಕೆಯ ಭಾಗವಾಗಿ ಹಿಜಾಬ್‌ ಧರಿಸಬೇಕೆಂದು ಬಯಸುತ್ತೇನೆ, ನಾನು ಹಿಜಾಬ್‌ ಧರಿಸಿದರೆ ಎಕ್ಸಾಮ್‌ ಬರೆಯಲು ಸಾಧ್ಯವಿಲ್ಲ.” ಎಂದು ಅಫ್ಸಾನ ಹೇಳುತ್ತಾರೆ. 

ಶಿಕ್ಷಣ ಇಲಾಖೆಯಿಂದ ಲಭ್ಯವಾದ ಮಾಹಿತಿಯ ಪ್ರಕಾರ, ಹೈಕೋರ್ಟ್ ತೀರ್ಪಿನ ನಂತರ ತಮ್ಮ ಶೈಕ್ಷಣಿಕ ಭವಿಷ್ಯ ತೂಗುಗತ್ತಿಯಲ್ಲಿ ಬಿದ್ದ ಉಡುಪಿಯ 232 ಪದವಿ ವಿದ್ಯಾರ್ಥಿಗಳಲ್ಲಿ ಅಫ್ಸಾನಾ ಕೂಡ ಒಬ್ಬಳು. ಉಡುಪಿಯ ಮುಸ್ಲಿಂ ಸಂಘಟನೆಗಳ ಒಕ್ಕೂಟವಾದ ʼಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟʼದ ಪ್ರಕಾರ, ಹಿಜಾಬ್‌ ತೀರ್ಪಿನಿಂದಾಗಿ ಕನಿಷ್ಠ 183 ಪದವಿ ಪೂರ್ವ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳನ್ನು ತಪ್ಪಿಸಿಕೊಂಡಿದ್ದಾರೆ. ಇದು ಉಡುಪಿಯ ಪಿಯು ಕಾಲೇಜುಗಳ ಒಟ್ಟು ಮುಸ್ಲಿಂ ಹುಡುಗಿಯರ (1446) 12.5% ಆಗಿದೆ.

ಕಾಲೇಜು ತೊರೆಯುವ ಆತಂಕವನ್ನು ಎದುರಿಸುತ್ತಿರುವ ಕೆಲವು ವಿದ್ಯಾರ್ಥಿನಿಯರು, ಹಿಜಾಬ್‌ ನಿಷೇಧವನ್ನು ಎತ್ತಿ ಹಿಡಿದಿರುವ ಹೈಕೋರ್ಟ್‌ ತೀರ್ಪು ಬಂದ ಬಳಿಕ, ಹಿಜಾಬ್‌ ತೆಗೆದು ಪರೀಕ್ಷೆ ಬರೆಯಲು ಯೋಚಿಸಿದ್ದಾರೆ. “ನಾನು ಈಗ ಮೂರನೇ ವರ್ಷದ ವಿದ್ಯಾರ್ಥಿನಿ, ನಾನು ಈಗ ಇದು ಮಾಡದಿದ್ದರೆ, ನನ್ನ ಮೂರು ವರ್ಷಗಳನ್ನು ಕಳೆದುಕೊಳ್ಳಬೇಕಾಗುತ್ತದೆ” ಎಂದು ಪರೀಕ್ಷೆ ಬರೆಯಲು ಸಿದ್ದವಾಗಿರುವ ಜಿ ಶಂಕರ್‌ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ತಿಳಿಸಿದ್ದಾಳೆ. ಆಕೆಯ ಹೆಸರನ್ನು ಬಹಿರಂಗಪಡಿಸಲು ಆಕೆ ಇಚ್ಛಿಸಿಲ್ಲ. ಆಕೆಯ ಪಕ್ಕ ಕುಳಿತಿದ್ದ ಆಕೆಯ ಗೆಳತಿ 20 ರ ಹರೆಯದ ಅಫ್ರಾ ಅಜ್ಮಲ್‌ ಅಸ್ಸಾದಿ, ಕಾಲೇಜನ್ನು ತೊರೆಯುವ ಬಗ್ಗೆ ಯೋಚಿಸುತ್ತಿದ್ದಾಳೆ. “ನಾವು ತರಗತಿಯಲ್ಲಿ ಹಿಜಾಬ್‌ನೊಂದಿಗೆ ಒಂದೇ ಬೆಂಚ್ ಮೇಲೆ ಕುಳಿತು ನಮ್ಮ ಬಿಡುವಿನ ವೇಳೆಯನ್ನು ಒಟ್ಟಿಗೆ ಕಳೆಯುತ್ತಿದ್ದೆವು. ಆದರೆ ಹಿಜಾಬ್‌ ವಿಚಾರದಲ್ಲಿ ನಾನು ರಾಜಿಯಾಗಲಾರೆ. ನಾನು ಬದಲಿ ಕಾಲೇಜು ಅಥವಾ ಆನ್‌ಲೈನ್ ಕೋರ್ಸ್‌ಗಾಗಿ ಹುಡುಕಾಟ ನಡೆಸಿದ್ದೇನೆ” ಎಂದು ಅಫ್ರಾ ಹೇಳಿದ್ದಾಳೆ. 

ಹಿಜಾಬ್‌ ಮೇಲಿನ ನಿಷೇಧದ ಜಾರಿಯು ವಿದ್ಯಾರ್ಥಿನಿಯರನ್ನು ಮತ್ತು ಪೋಷಕರನ್ನು ಬೇರೆ ಕಾಲೇಜುಗಳಿಗೆ ವರ್ಗಾವಣೆ ಮಾಡಲು ಯೋಚಿಸುವಂತೆ ಮಾಡಿದೆ. ಕೆಲವು ಪ್ರಕರಣಗಳಲ್ಲಿ, ತಮ್ಮ ಹೆಣ್ಣುಮಕ್ಕಳ ಶಿಕ್ಷಣದ ಸಲುವಾಗಿ ಕುಟುಂಬಗಳು ಬೇರೆ ಊರಿಗೆ ವಲಸೆ ಹೋಗಲು ಯೋಜಿಸುತ್ತಿವೆ. 

ಉಡುಪಿಯ ಮಹಾತ್ಮಗಾಂಧಿ ಸ್ಮಾರಕ (ಎಂಜಿಎಂ) ಕಾಲೇಜಿನಲ್ಲಿ ಓದುತ್ತಿರುವ ಬಿಎಸ್‌ಸಿ ವಿದ್ಯಾರ್ಥಿನಿಯ ಪೋಷಕರಾದ ಮೊಹಮ್ಮದ್ ಅಲಿ, “ಹಿಜಾಬ್‌ಗೆ ಅನುಮತಿ ಇರುವ ಕಾಲೇಜಿನಲ್ಲಿ ನಮ್ಮ ಮಗಳ ಅಧ್ಯಯನವನ್ನು ಮುಂದುವರಿಸುವ ಸಲುವಾಗಿ ನಾವು ಮಂಗಳೂರಿಗೆ ತೆರಳುವ ಬಗ್ಗೆ ಯೋಚಿಸುತ್ತಿದ್ದೇವೆ” ಎಂದಿದ್ದಾರೆ. ಈ ವಾರದವರೆಗೆ, ಅವರು ಮತ್ತು ಅವರ ಮಗಳು ಹಿಜಾಬ್ ಅನ್ನು ಈ ಮೊದಲು ಅನುಮತಿಸಿದ್ದ ಕಾಲೇಜುಗಳಲ್ಲಿ ಧರಿಸಲು ಹೈಕೋರ್ಟ್ ಅನುಮತಿ ನೀಡುತ್ತದೆ ಎಂದು ನಿರೀಕ್ಷಿಸುತ್ತಿದ್ದರು.

“ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಕಟಿಸಿದ ದಿನದಂದು ನಾನು ಟಿವಿ ನೋಡಲು ಭಯಪಟ್ಟಿದ್ದೆ. ಆದರೆ ನಾನು ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ನೋಡುತ್ತಿದ್ದೆ, ಹಿಂದೆ ಯಾವುದೇ ಸಮಸ್ಯೆಯಿಲ್ಲದ ನಮ್ಮ ಕಾಲೇಜುಗಳಲ್ಲಿ ಹಿಜಾಬ್ ಅನ್ನು ಅನುಮತಿಸಲಾಗುವುದು ಎಂದು ನಾವು ಆಶಿಸುತ್ತಿದ್ದೆವು” ಎಂದು ಅಲಿ ಪುತ್ರಿ ತಿಳಿಸಿದ್ದಾರೆ. 

ಕಾಲೇಜಿನ 58 ವಿದ್ಯಾರ್ಥಿನಿಯರು ತಮ್ಮ ಕಾಲೇಜು ಪ್ರಾಂಶುಪಾಲರನ್ನು ಭೇಟಿ ಮಾಡಿ ತಮಗೆ ಪರೀಕ್ಷೆ ಬರೆಯಲು ಅನುಮತಿ ಕೋರಿದ್ದಾರೆ. ಪ್ರತ್ಯೇಕ ಕೊಠಡಿಯಲ್ಲಾದರೂ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ವಿದ್ಯಾರ್ಥಿನಿಯರ ಮನವಿ ಮಾಡಿದ್ದಾರೆ.  “ನಮ್ಮನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿದರೆ ಮತ್ತು ಮಹಿಳಾ ಶಿಕ್ಷಕಿಯನ್ನು ಇನ್ವಿಜಿಲೇಟರ್ ಆಗಿ ನೇಮಿಸಿದರೆ ನಾವು ಹಿಜಾಬ್ ಅನ್ನು ತೆಗೆದುಹಾಕಲು ಒಪ್ಪಿಕೊಂಡೆವು. ಈ ವಿನಂತಿಯನ್ನು ಸಹ ನಿರಾಕರಿಸಲಾಗಿದೆ. ಹಿಜಾಬ್ ಇಲ್ಲದೆ ತರಗತಿಗೆ ಹೋಗುವುದನ್ನು ಊಹಿಸಲು ಕೂಡಾ ನನಗೆ ಸಾಧ್ಯವಿಲ್ಲ," ಎಂದ ಆಕೆ ಕುರಾನ್‌ನ ಇಂಗ್ಲಿಷ್ ಅನುವಾದದ ಪ್ರತಿಯಲ್ಲಿ ಎರಡು ಸೂಕ್ತಗಳನ್ನು ತೋರಿಸುತ್ತಾ, "ಹಿಜಾಬ್ ಅನ್ನು ಕುರಾನ್‌ನಲ್ಲಿ ಉಲ್ಲೇಖಿಸಲಾಗಿದೆ. ಹಾಗೂ ಅದನ್ನು ನಮ್ಮ ನಂಬಿಕೆಯ ಅಗತ್ಯ ಭಾಗವೆಂದು ನಾನು ಪರಿಗಣಿಸುತ್ತೇನೆ." ಎಂದು ಹೇಳಿದ್ದಾಳೆ. 

ಆದರೆ, ಹಿಜಾಬ್‌ಗೆ ಅವಕಾಶ ಇರುವ ಖಾಸಗಿ ಕಾಲೇಜುಗಳಿಗೆ ವರ್ಗಾವಣೆಯಾಗುವುದು ಅಫ್ಸಾನಳ ರೀತಿಯ ವಿದ್ಯಾರ್ಥಿಗಳಿಗೆ ಒಂದು ಆಯ್ಕೆಯಲ್ಲ. ಆಕೆಯಂತಹ ವಿದ್ಯಾರ್ಥಿಗಳಿಗೆ ಹಿಜಾಬ್ ನಿಷೇಧದ ಜಾರಿಯು ಅವರ ಶಿಕ್ಷಣದ ಅಂತ್ಯವನ್ನು ಸೂಚಿಸುತ್ತದೆ. ಆಕೆಯ ಪೋಷಕರು ಬೇರ್ಪಟ್ಟಿದ್ದರಿಂದ, ಅಫ್ಸಾನಾ ಓದುತ್ತಿರುವ ಸರ್ಕಾರಿ ಅನುದಾನಿತ ಕಾಲೇಜಿನ 3,000 ರೂ.ಗಳ ಸಾಧಾರಣ ಕಾಲೇಜು ಶುಲ್ಕವನ್ನು ಆಕೆಯ ಚಿಕ್ಕಪ್ಪ ಪಾವತಿಸಬೇಕಾಯಿತು. ತನಗೆ ಇರುವ ಅಪಾಯದ ಕುರಿತು ಸ್ಪಷ್ಟತೆಯಿಂದ ಮಾತನಾಡಿದ ಆಕೆ,  "ನಾನು ನನ್ನ ಪ್ರಸ್ತುತ ಕೋರ್ಸ್ ಅನ್ನು ಬಿಟ್ಟರೆ, ಖಾಸಗಿ ಕಾಲೇಜುಗಳಲ್ಲಿ ಶುಲ್ಕವನ್ನು ಭರಿಸಿ ಮುಂದುವರಿಸಲು ಸಾಧ್ಯವಾಗುವುದಿಲ್ಲ" ಎಂದು ಅಫ್ಸಾನಾ ಹೇಳುತ್ತಾಳೆ.

 ಕುಂದಾಪುರ, ಬೈಂದೂರು ಸೇರಿದಂತೆ ಜಿಲ್ಲೆಯಾದ್ಯಂತ ಕಾಲೇಜುಗಳಲ್ಲೂ ಇದೇ ಸ್ಥಿತಿ ಇದೆ. ಎರಡೂ ಪಟ್ಟಣಗಳಲ್ಲಿ ಕಳೆದ ವಾರ ಹಲವಾರು ಮುಸ್ಲಿಂ ಹುಡುಗಿಯರು ತಮ್ಮ ತರಗತಿಗಳು ಅಥವಾ ಪರೀಕ್ಷೆಗಳನ್ನು ತಪ್ಪಿಸಿಕೊಂಡಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲರು ಹೇಳುತ್ತಾರೆ. ಕುಂದಾಪುರದ ಆರ್‌ಎನ್ ಶೆಟ್ಟಿ ಸಂಯುಕ್ತ ಪಿಯು ಕಾಲೇಜಿನಲ್ಲಿ ಕಳೆದ ವಾರ 56 ಮುಸ್ಲಿಂ ಬಾಲಕಿಯರ ಪೈಕಿ ಕೇವಲ ಒಬ್ಬಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದರು. ಅದೇ ರೀತಿ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೂಡಾ 16 ಮುಸ್ಲಿಂ ಬಾಲಕಿಯರಲ್ಲಿ ಒಬ್ಬಳು ಮಾತ್ರ ತರಗತಿಗೆ ಹಾಜರಾಗಿದ್ದಳು.

 2011 ರ ಜನಗಣತಿಯ ಪ್ರಕಾರ 11.7 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಉಡುಪಿ ಜಿಲ್ಲೆಯಲ್ಲಿ ಮುಸ್ಲಿಂ ಜನಸಂಖ್ಯೆ ಕೇವಲ 8.22%. ನೆರೆಯ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ, ಮುಸ್ಲಿಂ ಜನಸಂಖ್ಯೆಯು ಉಡುಪಿಗಿಂತ ಸುಮಾರು ಎರಡು ಪಟ್ಟು ಹೆಚ್ಚು, ಅಂದರೆ ದಕ್ಷಿಣ ಕನ್ನಡದಲ್ಲಿ ಮುಸ್ಲಿಮರು 24% ರಷ್ಟಿದ್ದಾರೆ. ಉಡುಪಿಗಿಂತ ಮುಸ್ಲಿಮರ ಜನಸಂಖ್ಯೆ ಹೆಚ್ಚಿರುವ ಜಿಲ್ಲೆಗಳಲ್ಲೂ ಇದೇ ಸಮಸ್ಯೆಗಳು ಎದುರಾಗುತ್ತಿವೆ ಎಂದು ಮುಸ್ಲಿಂ ಸಂಘಟನೆಗಳು ಹೇಳುತ್ತವೆ.
 
ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಮುಸ್ಲಿಂ ವಿದ್ಯಾರ್ಥಿಗಳಿಂದ ಆನ್‌ಲೈನ್ ತರಗತಿಗಳಿಗೆ ಮನವಿಗಳು ಬರುತ್ತಿದೆ ಎಂದು ಹಿಜಾಬ್ ನಿಷೇಧ ಜಾರಿಯಿಂದ ಪರಿಣಾಮ ಬೀರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ದಾಖಲಿಸುತ್ತಿರುವ ಉಡುಪಿಯ ಮುಸ್ಲಿಂ ಒಕ್ಕೂಟ ಹೇಳಿದೆ. 

“ಉಡುಪಿ ಕೇಂದ್ರಬಿಂದುವಾಗಿದೆ. ಏಕೆಂದರೆ ಇಲ್ಲಿ ಸಮಸ್ಯೆ ಪ್ರಾರಂಭವಾಯಿತು. ಆದರೆ ಎಲ್ಲಾ ನೆರೆಯ ಜಿಲ್ಲೆಗಳು ಸೇರಿದಂತೆ ಇತರ ಹಲವು ಜಿಲ್ಲೆಗಳಿಂದ ಆನ್‌ಲೈನ್ ತರಗತಿಗಳಿಗಾಗಿ ನಾವು ಮನವಿಗಳನ್ನು ಸ್ವೀಕರಿಸಿದ್ದೇವೆ ”ಎಂದು ಒಕೂಟದ ಸದಸ್ಯ ಹಸನ್ ಮಾವೇದ್ ತಿಳಿಸಿದ್ದಾರೆ. ಉಪ್ಪಿನಂಗಡಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ 231 ಮುಸ್ಲಿಂ ವಿದ್ಯಾರ್ಥಿಗಳು ಮಾರ್ಚ್ 18 ರಂದು ನಡೆದ ತಮ್ಮ ಪೂರ್ವಸಿದ್ಧತಾ ಪರೀಕ್ಷೆಯಿಂದ ಹೊರಗುಳಿದಿದ್ದಾರೆ. ಮುಸ್ಲಿಂ ಹುಡುಗಿಯರಿಗೆ ಒಗ್ಗಟ್ಟನ್ನು ಪ್ರದರ್ಶಿಸಲು ಅವರೊಂದಿಗೆ ಮುಸ್ಲಿಂ ಹುಡುಗರು ಕೂಡಾ ಸೇರಿದ್ದರು ಎಂದು ಅವರು ತಿಳಿಸಿದ್ದಾರೆ. 

ತಮ್ಮ ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾಗಿರುವ ನೂರಾರು ಕುಟುಂಬಗಳಿಗೆ ಇದು ಬಿಕ್ಕಟ್ಟಿನ ಪರಿಸ್ಥಿತಿ ಎಂದು ಒಕ್ಕೂಟ ಬಣ್ಣಿಸಿದೆ. "ತೀರ್ಪು ಪ್ರಕಟವಾದಾಗಿನಿಂದ, ನಾವು ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ನಾವು ಏರ್ಪಡಿಸಿದ ಆನ್‌ಲೈನ್ ತರಗತಿಗಳಿಗೆ ಇನ್ನೂ 35 ವಿದ್ಯಾರ್ಥಿಗಳು ಸೇರಿಕೊಂಡಿದ್ದಾರೆ. ತಮ್ಮ ಭವಿಷ್ಯದ ಬಗ್ಗೆ ಸಂಕಟದಲ್ಲಿರುವ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಪ್ರತಿ ದಿನ ನಾವು ಸುಮಾರು 5-10 ಕರೆಗಳನ್ನು ಸ್ವೀಕರಿಸುತ್ತಿದ್ದೇವೆ”ಎಂದು ಹಸನ್ ಹೇಳಿದ್ದಾರೆ. "ಇದು ಈ ಕುಟುಂಬಗಳಿಗೆ ಸಂಕಷ್ಟ ತಂದಿಟ್ಟಿದೆ. ಪ್ರಸ್ತುತ ಶೈಕ್ಷಣಿಕ ವರ್ಷವನ್ನು ತಮ್ಮ ಹೆಣ್ಣುಮಕ್ಕಳು ಹೇಗೆ ಮುಗಿಸುತ್ತಾರೆ ಎಂದು ಅವರಿಗೆ ತಿಳಿಯುತ್ತಿಲ್ಲ ”ಎಂದು ಹಸನ್ ಹೇಳಿದ್ದಾರೆ.

ಕೃಪೆ: Thenewsminute.com

Writer - ಪ್ರಜ್ವಲ್‌ ಭಟ್‌, thenewsminute.com

contributor

Editor - ಪ್ರಜ್ವಲ್‌ ಭಟ್‌, thenewsminute.com

contributor

Similar News