ಬೇಕಲ | ಅಂಗಡಿ ವರಾಂಡದಲ್ಲಿ ವಿಶ್ರಮಿಸುತ್ತಿದ್ದವರ ಮೇಲೆ ಹರಿದ ಕಾರು: ಓರ್ವ ಮೃತ್ಯು, ಇಬ್ಬರು ಗಂಭೀರ
Update: 2022-03-24 11:50 IST
ಕಾಸರಗೋಡು, ಮಾ.24: ನಿಯಂತ್ರಣ ತಪ್ಪಿದ ಕಾರೊಂದು ಅಂಗಡಿ ವರಾಂಡದಲ್ಲಿ ವಿಶ್ರಮಿಸುತ್ತಿದ್ದವರ ಮೇಲೆ ಹರಿದ ಪರಿಣಾಮ ಓರ್ವ ಮೃತ ಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಇಂದು ಮುಂಜಾನೆ ಬೇಕಲ ಠಾಣಾ ವ್ಯಾಪ್ತಿಯ ಕೋಟಿಕುಳ ಎಂಬಲ್ಲಿ ನಡೆದಿರುವುದು ವರದಿಯಾಗಿದೆ.
ಮೃತರನ್ನು ವಿಷ್ಣು ಪ್ರಸಾದ್(20) ಎಂದು ಗುರುತಿಸಲಾಗಿದೆ. ಜೊತೆಗಿದ್ದ ನಿತಿನ್ ಮತ್ತು ಶ್ರೀಲಾಲ್ ಎಂಬವರು ಗಾಯಗೊಂಡಿದ್ದಾರೆ.
ವಿಷ್ಣು ಪ್ರಸಾದ್ ಸೇರಿದಂತೆ ಮೂವರು ಯುವಕರು ಸಮೀಪದ ತರವಾಡಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಅಂಗಡಿ ವರಾಂಡದಲ್ಲಿ ವಿಶ್ರಮಿಸುತ್ತಿದ್ದರು. ಈ ಸಂದರ್ಭದಲ್ಲಿ ಅತೀ ವೇಗದಿಂದ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಅಂಗಡಿ ವರಾಂಡಕ್ಕೆ ನುಗ್ಗಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಶ್ರೀ ಲಾಲ್ ರನ್ನು ಮಂಗಳೂರು ಹಾಗೂ ನಿತಿನ್ ರನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಬೇಕಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.