ಮಂಗಳೂರು: ಸ್ಕೂಟರ್ ಢಿಕ್ಕಿಯಾಗಿ ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿ ಮೃತ್ಯು
Update: 2022-03-24 20:43 IST
ಮಂಗಳೂರು, ಮಾ.24: ನಗರದ ಕಂಕನಾಡಿ ಬಳಿ ಸ್ಕೂಟರ್ ಢಿಕ್ಕಿಯಾಗಿ ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿಯು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ.
ಫೆ.17ರಂದು ರಾತ್ರಿ 11:15ಕ್ಕೆ ಕಂಕನಾಡಿಯ ಗಣೇಶ್ ಮೆಡಿಕಲ್ಸ್ ಎದುರು ರಸ್ತೆ ದಾಟುತ್ತಿದ್ದ ಸುಮಾರು 60 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಗೆ ಸ್ಕೂಟರ್ ಢಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮಾ.23ರಂದು ಮೃತಪಟ್ಟಿದ್ದಾರೆ.
ಮೃತ ಶರೀರವನ್ನು ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಸುಮಾರು 5.5 ಅಡಿ ಎತ್ತರ, ಬಿಳಿ ಮೈಬಣ್ಣ, ಅಗಲವಾದ ಮುಖ, ಸಾಧಾರಣ ಶರೀರ ಹೊಂದಿರುವ ಈ ಮೃತ ವ್ಯಕ್ತಿಯ ಎದೆಯ ಮೇಲೆ ಬಲ ಭಾಗದಲ್ಲಿ ಕಪ್ಪು ಮಚ್ಚೆ ಗುರುತು ಇದೆ. ವಾರಸುದಾರರು ಇದ್ದರೆ ಮಂಗಳೂರು ಸಂಚಾರ ಪೂರ್ವ ಠಾಣೆ (0824-2220523)ಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.