ಉಕ್ರೇನಿಯನ್ನರ ಸಾವು ತಡೆಯಲು ಶಸ್ತ್ರಾಸ್ತ್ರ ನೀಡಿ: ನ್ಯಾಟೊ ದೇಶಗಳಿಗೆ ಝೆಲೆಸ್ಕಿ ಮನವಿ

Update: 2022-03-25 01:54 GMT

ಕೀವ್: ಯುದ್ಧಪೀಡಿತ ಉಕ್ರೇನ್‍ನಲ್ಲಿ ಜನರ ಸಾವನ್ನು ತಡೆಯುವ ಸಲುವಾಗಿ ದೇಶಕ್ಕೆ ಶಸ್ತ್ರಾಸ್ತ್ರದ ನೆರವು ನೀಡಿ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆಸ್ಕಿ ಅವರು ನ್ಯಾಟೊ ಶೃಂಗವನ್ನು ಆಗ್ರಹಿಸಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಪಾಶ್ಚಿಮಾತ್ಯ ದೇಶಗಳ ಒಕ್ಕೂಟ ರಷ್ಯಾ ವಿರುದ್ಧ ಹೊಸ ನಿರ್ಬಂಧನೆಗಳನ್ನು ಹೇರಿದ್ದು, ಸೇನಾ ನೆರವಿನ ಆಶ್ವಾಸನೆ ನೀಡಿವೆ. ರಷ್ಯಾವನ್ನು ಅಂತರರಾಷ್ಟ್ರೀಯ ಜಿ20 ಕೂಟದಿಂದ ಉಚ್ಚಾಟಿಸುವ ಬಗ್ಗೆ ಕೂಡಾ ನ್ಯಾಟೊ ಶೃಂಗದಲ್ಲಿ ಚರ್ಚೆ ನಡೆದಿದೆ.

ಯುದ್ಧ ಇದೀಗ ಇಡೀ ದೇಶವನ್ನು ವ್ಯಾಪಿಸಿದ್ದು, ಉಕ್ರೇನ್‍ನ ದಕ್ಷಿಣ ನಗರವಾದ ಮರಿಯೊಪೋಲ್‍ನಲ್ಲಿ ರಷ್ಯಾದ ಬೃಹತ್ ಯುದ್ಧಟ್ಯಾಂಕರ್ ಗಳು ಸದ್ದು ಮಾಡುತ್ತಿರುವ ದೃಶ್ಯಾವಳಿಗಳು ಟಿವಿಯಲ್ಲಿ ಪ್ರಸಾರವಾಗುತ್ತಿವೆ. ಏತನ್ಮಧ್ಯೆ ಝೆಲೆಸ್ಕಿಯವರು ವಿಡಿಯೊ ಲಿಂಕ್ ಮೂಲಕ ತುರ್ತು ನ್ಯಾಟೊ ಶೃಂಗವನ್ನು ಮತ್ತು ಜಿ7 ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು.

"ರಷ್ಯನ್ ದಾಳಿಯಿಂದ, ರಷ್ಯನ್ನರ ವಶದಿಂದ ಉಕ್ರೇನಿಯನ್ನರ ಸಾವು ತಡೆಯಲು ನಮಗೆ ಅಗತ್ಯವಿರುವ ಎಲ್ಲ ಶಸ್ತ್ರಾಸ್ತ್ರಗಳನ್ನು ಪಾಶ್ಚಿಮಾತ್ಯ ದೇಶಗಳು ಪೂರೈಸಬೇಕು" ಎಂದು ಅವರು ಆಗ್ರಹಿಸಿದರು.

ತೀವ್ರ ರಾಜತಾಂತ್ರಿಕ ಕ್ರಮಗಳನ್ನು ಆರಂಭಿಸಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು, ಪಾಶ್ಚಿಮಾತ್ಯ ಒಕ್ಕೂಟವು ಉಕ್ರೇನ್ ಕೂಗನ್ನು ಕೇಳಿಸಿಕೊಳ್ಳುತ್ತಿದೆ. ನ್ಯಾಟೊ ಹಿಂದೆಂದಿಗಿಂತಲೂ ಒಗ್ಗಟ್ಟಾಗಿದೆ ಎಂದು ಹೇಳಿದ್ದಾರೆ.

ಇದೀಗ ಝೆಲೆಸ್ಕಿಯವರ ಹೇಳಿಕೆ ಬಳಿಕ ರಷ್ಯನ್ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಯುದ್ಧದಲ್ಲಿ ಬಳಸುವ ಸಾಧ್ಯತೆ ಅಧಿಕವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ರಷ್ಯಾ ಇವುಗಳನ್ನು ಬಳಸಿದರೆ ನಾವು ಸೂಕ್ತವಾಗಿ ಪ್ರತಿಸ್ಪಂದಿಸುತ್ತೇವೆ ಎಂದು ಬೈಡನ್ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News