ಅವಿಶ್ವಾಸ ನಿರ್ಣಯದ ಮೂಲಕ ಪದಚ್ಯುತಗೊಳ್ಳಲಿದ್ದಾರೆಯೇ ಪಾಕ್ ಪ್ರಧಾನಿ ಇಮ್ರಾನ್ ಖಾನ್?

Update: 2022-03-25 03:56 GMT
 ಪಾಕ್ ಪ್ರಧಾನಿ ಇಮ್ರಾನ್ ಖಾನ್ (PTI)

ಹೊಸದಿಲ್ಲಿ: ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಖ್ಯಾತ ಇನ್‍ಸ್ವಿಂಗರ್ ಗಳ ಮೂಲಕ ಹಲವು ಮಂದಿ ಖ್ಯಾತ ಬ್ಯಾಟರ್ ಗಳ ಕಂಗೆಡಿಸಿದವರು ಇಮ್ರಾನ್ ಖಾನ್. ಆದರೆ ಇದೀಗ ರಾಜಕೀಯ ಪಂದ್ಯದಲ್ಲಿ ಅವಿಶ್ವಾಸಮತ ಎಂಬ ಬೌನ್ಸರ್ ಎದುರಿಸುತ್ತಿರುವ ಪಾಕ್ ಪ್ರಧಾನಿ ತಮ್ಮ ವಿಕೆಟ್ ಕಳೆದುಕೊಳ್ಳುವರೇ ಎಂಬ ಪ್ರಶ್ನೆ ಕಾಡುತ್ತಿದೆ. ಅವಿಶ್ವಾಸ ನಿರ್ಣಯದ ಮೂಲಕ ಪದಚ್ಯುತಗೊಂಡ ದೇಶದ ಮೊದಲ ಪ್ರಧಾನಿ ಎನಿಸಿಕೊಳ್ಳುತ್ತಾರೆಯೇ ಎನ್ನುವ ಚರ್ಚೆಗಳು ನಡೆಯುತ್ತಿವೆ.

ಅವರ ಸರ್ಕಾರ ಅಲ್ಪ ಬಹುಮತವನ್ನು ಹೊಂದಿರುವ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ನಿರಾಳವಾಗಿ ಇರುವುದು ಅಸಾಧ್ಯ. ಇದೀಗ ಎಲ್ಲ ಪ್ರತಿಕೂಲಗಳನ್ನು ಅವರು ಎದುರಿಸುವ ಪರಿಸ್ಥಿತಿ ಎದುರಾಗಿದೆ. ಪಾಕಿಸ್ತಾನದಲ್ಲಿ ಪಿಟಿಐ ನೇತೃತ್ವದ ಮೈತ್ರಿಕೂಟ ಸರ್ಕಾರ 176 ಸದಸ್ಯರ ಬೆಂಬಲ ಹೊಂದಿದ್ದು, ವಿರೋಧ ಪಕ್ಷಗಳು 162 ಸದಸ್ಯರನ್ನು ಹೊಂದಿವೆ.

ಪಿಪಿಪಿ ಮತ್ತು ಪಿಎಂಎಲ್(ಎನ್) ಮೈತ್ರಿಕೂಟಕ್ಕಿಂತ ಇಮ್ರಾನ್ ಮೇಲುಗೈ ಸಾಧಿಸಿದ್ದಾರೆ. ಆದರೆ ಇಮ್ರಾನ್ ನೇತೃತ್ವದ ತೆಹ್ರಿಕ್ ಇ ಇನ್ಸಾಫ್ ಪಾರ್ಟಿಯಲ್ಲಿ ಒಡಕು ಹಾಗೂ ಮಿತ್ರ ಪಕ್ಷಗಳು ಕೂಟದಿಂದ ದೂರವಾಗುತ್ತಿರುವುದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಇಮ್ರಾನ್ ನೇತೃತ್ವದ ಪಿಟಿಐನ 24 ಸಂಸದರು ಸರ್ಕಾರದ ವಿರುದ್ಧ ಮತ ಚಲಾಯಿಸುವುದಾಗಿ ಬಹಿರಂಗ ಹೇಳಿಕೆ ನೀಡಿದ್ದಾರೆ.

ಬುಧವಾರ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಪಿಟಿಐ ಮಿತ್ರ ಪಕ್ಷಗಳಾದ ಎಂಕ್ಯೂಎಂ, ಪಿಎಂಎಲ್-ಕ್ಯೂ ಮತ್ತು ಬಿಎಪಿ, ಸರ್ಕಾರದ ಜತೆಗಿನ ಸಂಬಂಧ ಕಡಿದುಕೊಂಡಿವೆ. ಇಷ್ಟು ಸದಸ್ಯರನ್ನು ಕಳೆದುಕೊಂಡರೆ ಸರ್ಕಾರವನ್ನು ಬೆಂಬಲಿಸುವ ಸದಸ್ಯರ ಸಂಖ್ಯೆ 135ಕ್ಕೆ ಕುಸಿಯಲಿದ್ದು, ವಿರೋಧ ಪಕ್ಷಗಳ ಸಂಯುಕ್ತ ಬಲ 203ಕ್ಕೇರಲಿದೆ.

ಶುಕ್ರವಾರ ನಡೆಯುವ ಸಂಸತ್ ಅಧಿವೇಶನದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದ್ದು, ಯಾವುದೇ ಕಾರಣಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಇಮ್ರಾನ್ ಸ್ಪಷ್ಟಪಡಿಸಿದ್ದಾರೆ. ಕೊನೆಯ ಬಾಲ್ ವರೆಗೂ ನಾನು ಆಡುತ್ತೇನೆ. ಅವರ ಮೇಲೆ ಒತ್ತಡ ಇದ್ದು, ಕೊನೆಯ ದಿನ ಅವರಿಗೆ ಅಚ್ಚರಿ ತರುತ್ತೇನೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News