ಪಶ್ಚಿಮಬಂಗಾಳ: ಹತ್ಯಾಕಾಂಡದ ಸಿಬಿಐ ತನಿಖೆಗೆ ಕಲ್ಕತಾ ಹೈಕೋರ್ಟ್ ಆದೇಶ
Update: 2022-03-25 10:50 IST
ಕೋಲ್ಕತಾ: ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಬೊಗ್ಟುಯಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ(ಸಿಬಿಐ) ದಿಂದ ತನಿಖೆ ನಡೆಸಲು ಕಲ್ಕತ್ತಾ ಹೈಕೋರ್ಟ್ ನಿರ್ದೇಶನ ನೀಡಿದೆ ಎಂದು The Hindu ಟ್ವೀಟಿಸಿದೆ.
ಸೋಮವಾರ ಬಿರ್ಭೂಮ್ ಜಿಲ್ಲೆಯ ಬೊಗ್ಟುಯಿ ಗ್ರಾಮದಲ್ಲಿ ತೃಣಮೂಲ ಕಾಂಗ್ರೆಸ್ ನ ಉಪ ಗ್ರಾಮ ಪ್ರಧಾನ ಬದು ಶೇಖ್ ಹತ್ಯೆಯ ನಂತರ ಭುಗಿಲೆದ್ದ ಹಿಂಸಾಚಾರದಲ್ಲಿ ಗ್ರಾಮದ ಕನಿಷ್ಠ ಎಂಟು ಮನೆಗಳ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಲಾಗಿದ್ದು, ಇದರ ಪರಿಣಾಮವಾಗಿ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು.
ಉಪ ಪ್ರಧಾನ ಬದು ಶೇಖ್ ಹತ್ಯೆ ಹಾಗೂ ಮನೆಗಳ ಮೇಲಿನ ದಾಳಿಯ ಘಟನೆಗೆ ಸಂಬಂಧಿಸಿ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆ ಮೇಲಿನ ದಾಳಿಯ ಪ್ರಕರಣದಲ್ಲಿ 11 ಮಂದಿಯನ್ನು ಬಂಧಿಸಲಾಗಿದೆ.