ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ರಥೋತ್ಸವ ಪ್ರಾರಂಭ: ಹಿಂದೂಯೇತರ ವ್ಯಾಪಾರಿಗಳಿಗೆ ಅವಕಾಶ ನಿರಾಕರಣೆ
ಕುಂದಾಪುರ, ಮಾ.25: ಕೊಲ್ಲೂರಿನ ಶ್ರೀಮೂಕಾಂಬಿಕಾ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಸಾಂಪ್ರದಾಯಿಕ ವಿಧಿವಿಧಾನಗಳು ಹಾಗೂ ರಥೋತ್ಸವದೊಂದಿಗೆ ಶುಕ್ರವಾರ ಪ್ರಾರಂಭಗೊಂಡಿದ್ದು, ಮೂರು ದಿನಗಳ ಕಾಲ ನಡೆಯಲಿದೆ.
ಜಿಲ್ಲೆಯ ಕಾಪು ಮಾರಿಗುಡಿ, ಪಡುಬಿದ್ರಿ ದೇವಸ್ಥಾನಗಳ ಬಳಿಕ ಇದೀಗ ಬೈಂದೂರು ತಾಲೂಕಿನ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲೂ ಮುಸ್ಲಿಂ ಸಮುದಾಯದವರ ಸಹಿತ ಹಿಂದೂಯೇತರ ವ್ಯಾಪಾರಿಗಳಿಗೆ ಅಂಗಡಿ ತೆರೆಯಲು ಅವಕಾಶವನ್ನು ನಿರಾಕರಿಸಲಾಗಿದೆ.
ಕೊಲ್ಲೂರು ಜಾತ್ರೆಯಲ್ಲಿ ಅನ್ಯಮತೀಯರಿಗೆ ಯಾವುದೇ ವ್ಯಾಪಾರಕ್ಕೆ ಅವಕಾಶ ನೀಡದಂತೆ ಸ್ಥಳೀಯ ಕೊಲ್ಲೂರು ಗ್ರಾಮ ಪಂಚಾಯತಿಗೆ ಹಾಗೂ ದೇವಸ್ಥಾನದ ಆಡಳಿತ ಸಮಿತಿಗೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ಇತ್ತೀಚೆಗೆ ಮನವಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಮುಸ್ಲಿಂ ಮತ್ತು ಹಿಂದೂಯೇತರ ಸಮುದಾಯದ ವ್ಯಾಪಾರಿಗಳು ವ್ಯಾಪಾರಕ್ಕಾಗಿ ಆಗಮಿಸಿಲ್ಲ ಎನ್ನಲಾಗಿದೆ.
ಪ್ರತಿವರ್ಷ ಸುಮಾರು 60ರಿಂದ 80ರಷ್ಟು ಅಂಗಡಿಗಳು ಬರುತ್ತಿದ್ದು, ಈ ಬಾರಿ ಆಗಮಿಸಿದ ಅಂಗಡಿಗಳ ಸಂಖ್ಯೆಯೂ ಕಡಿಮೆಯಿದ್ದಂತೆ ಕಂಡುಬಂದಿತು.
ಇಂದು ಸಂಜೆ ವಿಶ್ವ ಹಿಂದೂ ಪರಿಷತ್, ಭಜರಂಗದಳ ಕೊಲ್ಲೂರು ಘಟಕದ ವತಿಯಿಂದ ಕೊಲ್ಲೂರು ಬಸ್ ನಿಲ್ದಾಣದಲ್ಲಿ ಹಿಂದೂ ಧರ್ಮಸಭೆಯನ್ನು ಕೂಡ ಆಯೋಜನೆ ಮಾಡಲಾಗಿದೆ.
ಕಳೆದೆರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವವನ್ನು ಸರಳವಾಗಿ ಆಚರಿಸಲಾಗಿತ್ತು. ಆದರೆ ಈ ಬಾರಿ ಅಂಗಡಿ ವಿವಾದದ ನಡುವೆಯೂ ಇಂದಿನಿಂದ ಇತಿಹಾಸ ಪ್ರಸಿದ್ಧ ಕೊಲ್ಲೂರು ಶ್ರೀಮೂಕಾಂಬಿಕಾ ದೇವಳದಲ್ಲಿ ಜಾತ್ರೆ ಸಂಭ್ರಮದಿಂದ ನಡೆಯುತ್ತಿದೆ.
ಶುಕ್ರವಾರವಾದ್ದರಿಂದ ಮುಂಜಾನೆಯಿಂದಲೇ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ದೃಶ್ಯ ಕಂಡುಬಂದಿತ್ತು. ಅಪರಾಹ್ನ 12:00 ಗಂಟೆ ಸುಮಾರಿಗೆ ನಡೆದ ರಥಾರೋಹಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು.
‘ಸಂಘರ್ಷ ಬೇಡ ಎಂದು ಅವಕಾಶ ನೀಡಿಲ್ಲ’
ಕೊಲ್ಲೂರು ವಾರ್ಷಿಕ ಜಾತ್ರಾ ಮಹೋತ್ಸವನ್ನು ನಿರ್ವಿಘ್ನವಾಗಿ ನೆರವೇರಿಸುವುದು ನಮ್ಮ ಉದ್ದೇಶವಾಗಿದೆ. ಉತ್ಸವವನ್ನು ಸುಸೂತ್ರವಾಗಿ ಮಾಡುವುದು ನಮ್ಮ ಕರ್ತವ್ಯ. ಹಿಂದೂಯೇತರರಿಗೆ ಅವಕಾಶ ಕೊಡಬಾರದೆಂದು ಸಂಘ ಪರಿವಾರದ ಸಂಘಟನೆಗಳು ಮನವಿ ಮಾಡಿದ್ದವು. ಈ ಮನವಿಯನ್ನು ನಾವು ಬೆಂಬಲಿಸಿದ್ದೇವೆ. ದೇವರ ದರ್ಶನಕ್ಕೆ ಬಂದ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಯಾವುದೇ ಸಂಘರ್ಷದ ವಾತಾವರಣ ಬೇಡ ಎಂಬ ಉದ್ದೇಶದಿಂದ ಈ ನಿರ್ಧಾರ. ಕೊಲ್ಲೂರು ದೇವಸ್ಥಾನದ ವಠಾರದಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರ ವ್ಯವಸ್ಥೆ ಮಾಡಿದ್ದೇವೆ. ಸಾರ್ವಜನಿಕ ರಸ್ತೆಯಲ್ಲಿ ಪರವಾನಿಗೆ ಕೊಡುವ ಅಧಿಕಾರ ಪಂಚಾಯತಿಗಿದೆ.
-ಕೆರಾಡಿ ಚಂದ್ರಶೇಖರ ಶೆಟ್ಟಿ, ಕೊಲ್ಲೂರು ಮುಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೊಲ್ಲೂರು.