ಮಾ.30-ಎ.7: ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳ ಬ್ರಹ್ಮಕಲಶ, ನಾಗಮಂಡಲ ಸೇವೆ

Update: 2022-03-25 14:28 GMT

ಪಡುಬಿದ್ರಿ: 10 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಪುನರ್ ನಿರ್ಮಾಣಗೊಂಡ ಇತಿಹಾಸ ಪ್ರಸಿದ್ಧ ಹೆಜಮಾಡಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ನಾಗಮಂಡಲ ಸೇವೆಯ ಸಂಭ್ರಮ ಮಾರ್ಚ್ 30ರಿಂದ ಎಪ್ರಿಲ್ 7ರ ವರೆಗೆ ನಡೆಯಲಿದೆ.

ಶುಕ್ರವಾರ ದೇವಳದ ಪ್ರಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ದಯಾನಂದ ಹೆಜಮಾಡಿ ಈ ಬಗ್ಗೆ ಸಮಗ್ರ ಮಾಹಿತಿ ನೀಡಿದ ಅವರು, ಹೆಜಮಾಡಿ ಗ್ರಾಮದ ಸುಮಾರು 800 ವರ್ಷಗಳ ಇತಿಹಾಸವಿರುದ್ದು, ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ದೇವಳ ಪುನರ್‍ನಿರ್ಮಾಣಗೊಂಡಿದೆ. ಎಡಪದವು ಶ್ರೀ ರಾಧಾಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ.

ಮಾರ್ಚ್ 30ರಂದು ಸಾಮೂಹಿಕ ದೇವತಾ ಪ್ರಾರ್ಥನೆಯೊಂದಿಗೆ ಬ್ರಹ್ಮಕಲಶೋತ್ಸವ ಹಾಗೂ ನಾಗಮಂಡಲದ ವಿವಿಧಾನಗಳು ಆರಂಭಗೊಳ್ಳಲಿದೆ. ಎಪ್ರಿಲ್ 3ರಂದು ಸಂಜೆ 4 ಗಂಟೆಗೆ ಪುತ್ತಿಗೆ ಮಠಾೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಕಟೀಲು ಕ್ಷೇತ್ರದ ಶ್ರೀ ಅನಂತ ಪದ್ಮನಾಭ ಅಸ್ರಣ್ಣರು, ಸಗ್ರಿ ಗೋಪಾಲಕೃಷ್ಣ ಸಾಮಗರು ಹಾಗೂ ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಜಯಂತ ಶೆಟ್ಟಿ ಪುಣೆಯವರ ಉಪಸ್ಥಿತಿಯಲ್ಲಿ ಹೊರೆಕಾಣಿಕೆ ಮೆರವಣಿಗೆಯು ಹೆಜಮಾಡಿಕೋಡಿ ಶಾಲಾ ಮೈದಾನದಿಂದ ಆರಂಭಗೊಳ್ಳಲಿದೆ.

5ರಂದು ಬೆಳಿಗ್ಗೆ ಅಶ್ಲೇಷ ಬಲಿ, ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ, ಸಂಜೆ 5 ಗಂಟೆಗೆ ಹಾಲಿಟ್ಟು ಸೇವೆ, 6 ಗಂಟೆಯಿಂದ ಸಗ್ರಿ ಗೋಪಾಲಕೃಷ್ಣ ಸಾಮಗರ ನೇತೃತ್ವದಲ್ಲಿ ನಾಗಮಂಡಲ ಸೇವೆ ನಡೆಯಲಿದೆ.

6ರಂದು ಬೆಳಿಗ್ಗೆ 9.36ರ ವೃಷಭ ಲಗ್ನ ಸುಮುಹೂರ್ತದಲ್ಲಿ ಸಹಸ್ರ ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಮಹಾ ರಥಾರೋಹಣ, ಮಧ್ಯಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ, ರಾತ್ರಿ ಮಹಾ ರಥೋತ್ಸವ, ಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರ ಭಾಗವತಿಕೆಯೊಂದಿಗೆ ವಿಶೇಷ ಬಲಿ ಸೇವೆ, ಖ್ಯಾತ ಸ್ಯಾಕ್ಸೋಫೋನ್ ವಾದಕಿ ಭಾರತಿ ಗೋಪಾಲ್‍ರವರ ಸ್ಯಾಕ್ಸೋಫೋನ್ ವಾದನದೊಂದಿಗೆ ವಿಶೇಷ ಬಲಿ ಸೇವೆ ನಡೆಯಲಿದೆ.

6ರಂದು ಬೆಳಿಗ್ಗೆ 9.45 ಗಂಟೆಗೆ ಶ್ರೀ ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಜಯಂತ ಶೆಟ್ಟಿ ಪುಣೆ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪುತ್ತಿಗೆ ಮಠಾೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿರುವರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಕಾರಿಯವರಾದ ರಾಜಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅನುಗ್ರಹ ಭಾಷಣ ಗೈಯಲಿರುವರು. ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಮೊಕ್ತೇಸರರಾದ ಶ್ರೀ ಅನಂತ ಪದ್ಮನಾಭ ಅಸ್ರಣ್ಣರು ಶುಭಾಶಂಸನೆ ನೀಡಲಿರುವರು. ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಶಾಸಕ ಲಾಲಾಜಿ ಆರ್.ಮೆಂಡನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಬಹುಭಾಷಾ ಚಲನಚಿತ್ರ ನಟ ಸುಮನ್ ತಲವಾರ್ ಸಹಿತ ಗಣ್ಯರನೇಕರು ಉಪಸ್ಥಿತರಿರುವರು.

ಬ್ರಹ್ಮಕಲಶೋತ್ಸವದ ಅಂಗವಾಗಿ ಮಾರ್ಚ್ 30 ರಾತ್ರಿ 8 ಗಂಟೆಗೆ ಶಿವದೂತೆ ಗುಳಿಗೆ, ನಾಟಕ, ಮಾರ್ಚ್ 31 ಸಂಜೆ 6 ಗಂಟೆಗೆ ಭಜನೆ, ಎಪ್ರಿಲ್ 2 ಸಂಜೆ 7 ಗಂಟೆಗೆ ಯಕ್ಷಗಾನ ತಾಳಮದ್ದಳೆ, ಎಪ್ರಿಲ್ 4 ರಾತ್ರಿ 8 ಗಂಟೆಗೆ ದಾಂಡಿಯಾ ನೃತ್ಯ ವೈವಿಧ್ಯ, ಎಪ್ರಿಲ್ 5 ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಭರತನಾಟ್ಯ, ಯಕ್ಷ ನಾಟ್ಯ ವೈಭವ, ಸಿತಾರ ವಾದನ, ಪಂಚ ವೀಣಾ ವಾದನ, ಭಜನೆ, ಎಪ್ರಿಲ್ 6 ಸಂಜೆ 6 ಗಂಟೆಯಿಂದ ಯಕ್ಷಗಾನ ಬಯಲಾಟ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ದೇವಳದ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ಜಿನರಾಜ ಬಂಗೇರ ಮತ್ತು ಸುಧಾಕರ ಕರ್ಕೇರ, ಕಾರ್ಯದರ್ಶಿ ದಿವಾಕರ ಹೆಜ್ಮಾಡಿ, ಆಡಳಿತ ಸಮಿತಿಯ ರವೀಂದ್ರ ಕೋಟ್ಯಾನ್, ಸಂಘಟನಾ ಕಾರ್ಯದರ್ಶಿ ಸಚಿನ್ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ನಾಪತ್ತೆ