×
Ad

ಛತ್ತೀಸ್‌ಗಢ: ಪುತ್ರಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತು 10 ಕಿ.ಮೀ. ದೂರ ಸಾಗಿದ ತಂದೆ; ತನಿಖೆಗೆ ಆದೇಶ

Update: 2022-03-26 10:30 IST

Photo: Twitter/@ANI_MP_CG_RJ

ಅಂಬಿಕಾಪುರ( ಛತ್ತೀಸ್‌ಗಢ): ಛತ್ತೀಸ್‌ಗಢದ ಸುರ್ಗುಜಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಏಳು ವರ್ಷದ ಪುತ್ರಿಯ ಮೃತದೇಹವನ್ನು ಭುಜದ ಮೇಲೆ ಹೊತ್ತುಕೊಂಡು ಮನೆಯತ್ತ ಸಾಗಿರುವ ಘಟನೆ ನಡೆದಿದ್ದು, ಈ  ವೀಡಿಯೊ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಘಟನೆಯ ಬಗ್ಗೆ ಎಚ್ಚೆತ್ತುಕೊಂಡಿರುವ  ಆರೋಗ್ಯ ಸಚಿವ ಟಿ.ಎಸ್. ಸಿಂಗ್ ಡಿಯೋ ತನಿಖೆಗೆ ಆದೇಶಿಸಿದ್ದಾರೆ.

ಜಿಲ್ಲೆಯ ಲಖನ್‌ಪುರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಬೆಳಗ್ಗೆ ಬಾಲಕಿ ಮೃತಪಟ್ಟಿದ್ದು, ಮೃತದೇಹ ಸಾಗಿಸಲು ವಾಹನ ಬರುವ ಮೊದಲೇ ಬಾಲಕಿಯ ತಂದೆ ಮೃತದೇಹ ಹೊತ್ತುಕೊಂಡು ಹೋಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

"ಶೀಘ್ರದಲ್ಲೇ ಶವ ಸಾಗಿರುವ ವಾಹನ ಬರಲಿದೆ ಎಂದು ಕುಟುಂಬ ಸದಸ್ಯರಿಗೆ ತಿಳಿಸಿದ್ದೇವೆ. ವಾಹನವು ಬೆಳಿಗ್ಗೆ 9:20 ರ ಸುಮಾರಿಗೆ ಬಂದಿತ್ತು. ಆದರೆ ಆ ಹೊತ್ತಿಗೆ ಈಶ್ವರ ದಾಸ್ ಮೃತದೇಹದೊಂದಿಗೆ ಹೊರಟು ಹೋಗಿದ್ದರು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮದಾಳ ಗ್ರಾಮದ ನಿವಾಸಿ ಈಶ್ವರ ದಾಸ್ ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಪುತ್ರಿ ಸುರೇಖಾಳನ್ನು ಲಖನ್‌ಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೆಳಗ್ಗೆ ಕರೆತಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಹುಡುಗಿಯ ಆಮ್ಲಜನಕದ ಮಟ್ಟವು ತುಂಬಾ ಕಡಿಮೆಯಾಗಿತ್ತು. ಆಕೆಯ ಪೋಷಕರ ಪ್ರಕಾರ ಬಾಲಕಿ ಕೆಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದಳು. ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆಯನ್ನು ಆರಂಭಿಸಲಾಗಿತ್ತು. ಆದರೆ ಆಕೆಯ ಸ್ಥಿತಿಯು ಹದಗೆಟ್ಟಿತು. ಬೆಳಿಗ್ಗೆ 7:30 ರ ಸುಮಾರಿಗೆ ಬಾಲಕಿ ಸಾವನ್ನಪ್ಪಿದಳು" ಎಂದು ಡಾ. ವಿನೋದ್ ಭಾರ್ಗವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News