ಕೇಜ್ರಿವಾಲ್ ಸರಕಾರದಿಂದ 5 ವರ್ಷಗಳಲ್ಲಿ 20 ಲಕ್ಷ ಉದ್ಯೋಗಗಳ ಸೃಷ್ಟಿಯ ಗುರಿ

Update: 2022-03-26 19:29 GMT

ಹೊಸದಿಲ್ಲಿ,ಮಾ.26: ದಿಲ್ಲಿ ಸರಕಾರದ 2022-23ನೇ ಸಾಲಿನ ಬಜೆಟ್‌ನ್ನು ಉಪಮುಖ್ಯಮಂತ್ರಿ ಹಾಗೂ ವಿತ್ತ ಸಚಿವ ಮನೀಶ್ ಸಿಸೋಡಿಯಾ ಶನಿವಾರ ವಿಧಾನಸಭೆಯಲ್ಲಿ ಮಂಡಿಸಿದರು ಮುಂದಿನ ಐದು ವರ್ಷಗಳ ಅವಧಿಯಲ್ಲಿ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. . 75,800 ಕೋಟಿ ರೂ. ಯೋಜನಾಗಾತ್ರದ ಈ ಬಜೆಟ್ ರಾಷ್ಟ್ರ ರಾಜಧಾನಿಯಲ್ಲಿ ಇಲೆಕ್ಟ್ರಾನಿಕ್ ನಗರದ, ಸ್ಥಾಪನೆ, ರಾತ್ರಿ ಆರ್ಥಿಕತೆ, ರಿಟೇಲ್ ಹಾಗೂ ರಖಂ ಮಾರುಕಟ್ಟೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

 ರೋಝ್‌ಗಾರ್ (ಉದ್ಯೋಗ) ಬಜೆಟ್ ಎಂದೇ ಬಿಂಬಿಸಲಾದ ಈ ಬಜೆಟ್ ಕಳೆದ ವರ್ಷಕ್ಕಿಂತ ಶೇ.9.86ರಷ್ಟು ಅಧಿಕವಾಗಿದೆ .2021-22ನೇ ಸಾಲಿನಲ್ಲಿ ದಿಲ್ಲಿ ಬಜೆಟ್ ಗಾತ್ರವು 69 ಸಾವಿರ ಕೋಟಿ ರೂ.ಗಳಾಗಿತ್ತು. ‘ರೋಜ್‌ಗಾರ್’ ಬಜೆಟ್ ದಿಲ್ಲಿಯ ಆರ್ಥಿಕತೆಯನ್ನು ಪ್ರಗತಿಯ ಪಥದೆಡೆಗೆ ಕೊಂಡೊಯ್ಯಲಿದೆ ಹಾಗೂ ಲಕ್ಷಾಂತರ ಉದ್ಯೋಗವಕಾಶಗಳನ್ನು ಸೃಷ್ಟಿಸಲಿದೆ ಎಂದು ಸಿಸೋಡಿಯಾ ಬಜೆಟ್ ಭಾಷಣದಲ್ಲಿ ತಿಳಿಸಿದರು. ಕೋವಿಡ್-19ನ ಪರಿಣಾಮದಿಂದ ದಿಲ್ಲಿಯ ಆರ್ಥಿಕತೆ ಹಂತಹಂತವಾಗಿ ಚೇತರಿಸಿಕೊಳ್ಳುತ್ತಿದೆ ಎಂದರು.

ನೂತನ ‘ ರೋಝ್‌ಗಾರ್’ ಬಜೆಟ್‌ ಬಗ್ಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಜೆಚ್ ದೊಡ್ಡ ಪ್ರಮಾಣದ ಯುವಜನರಿಗೆ ಉದ್ಯೋಗವನ್ನು ಸೃಷ್ಟಿಸಲಿದೆ. ದಿಲ್ಲಿಯ ಪ್ರತಿಯೊಂದು ವರ್ಗದ ಬಗೆಗೂ ಈ ಬಜೆಟ್ ಕಾಳಜಿ ವಹಿಸಿದೆ’’ ಎಂದವರು ಪ್ರಶಂಸಿಸಿ ಟ್ವೀಟ್ ಮಾಡಿದ್ದಾರೆ.

‘ರೋಝ್‌ಗಾರ್ ಬಝಾರ್ 2.0’ ಎಂಬ ಕೃತಕ ಬುದ್ಧಿಮತ್ತೆ ಆಧಾರಿತ ವೆಬ್‌ಸೈಟ್ ಹಾಗೂ ಮೊಬೈಲ್ ಆ್ಯಪ್‌ಕೂಡಾ ಆರಂಭಗೊಳ್ಳಲಿದ್ದು, ಅವುಗಳ ಮೂಲಕ ವಿಶೇಷವಾಗಿ ಮಹಿಳೆಯರು ಸೇರಿದಂತೆ ದಿಲ್ಲಿಯಲ್ಲಿ ಪ್ರತಿ ವರ್ಷ ಕನಿಷ್ಠ ಒಂದು ಲಕ್ಷ ಮಂದಿಗೆ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದರು.

ಸ್ಥಳೀಯ ಖಾದ್ಯಗಳಿಗೆ ಉತ್ತೇಜನ ನೀಡಲು ಆಹಾರ ಟ್ರಕ್ ನೀತಿ ಜಾರಿಗೆ ಬರಲಿದೆ. ಈ ಫುಡ್ ಟ್ರಕ್‌ಗಳು ರಾತ್ರಿ 8:00 ಗಂಟೆಯಿಂದ ನಸುಕಿನ 2:00 ಗಂಟೆಯವರೆಗೆ ಬೀದಿಗಳಲ್ಲಿ ಸಂಚರಿಸಲಿದ್ದು, ಆ ಮೂಲಕ ರಾಜಧಾನಿಯಲ್ಲಿ ರಾತ್ರಿ ಆರ್ಥಿಕತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಲಾಗಿದೆ ಎಂದರು.

ಸತತ ಎಂಟನೇ ವರ್ಷದ ಬಜೆಟ್ ಮಂಡಿಸಿದ ಸಿಸೋಡಿಯಾ ಅವರು ಮುಂದಿನ ಐದು ವರ್ಷಗಳಲ್ಲಿ ದಿಲ್ಲಿ ಸರಕಾರವು 20 ಲಕ್ಷ ಉದ್ಯೋಗಗಳ ಸೃಷ್ಟಿಗಾಗಿ 4500 ಕೋಟಿ ರೂ.ಗಳನನು ವ್ಯಯಿಸಲಿದೆ ಹಾಗೂ ಈ ಉದ್ದೇಶಕ್ಕಾಗಿ 2022-23ನೇ ಸಾಲಿನ ಬಜೆಟ್‌ನಲ್ಲಿ 800 ಕೋಟಿ ರೂ. ಮೀಸಲಿಡಲಿದೆ ಎಂದರು.

 ‘ರೋಝ್ ಗಾರ್’ ಬಜೆಟ್‌ನಡಿ ಕೇಜ್ರಿವಾಲ್ ಸರಕಾರವು ನಗರದಲ್ಲಿ ರಖಂ ಹಾಗೂ ರಿಟೇಲ್ ಮಾರುಕಟ್ಟೆಗಳನ್ನು ಸ್ಥಾಪಿಸುವ ಮೂಲಕ ಪ್ರವಾಸಿಗರನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲಿದೆ ಮತ್ತು ಆರ್ಥಿಕತೆಗೆ ಉತ್ತೇಜನ ನೀಡಲು ಉದ್ಯೋಗಳನ್ನು ಸೃಷ್ಟಿಸಲಿದೆ. ಹಾಲಿ ಬಜೆಟ್‌ನಲ್ಲಿ ಇದಕ್ಕಾಗಿ 250 ಕೋಟಿ ರೂ. ಮೀಸಲಿಡಲಾಗುವುದು ಎಂದವರು ತಿಳಿಸಿದರು.

   ಸರಕಾರ ಹಾಗೂ ಖಾಸಗಿ ವಲಯಗಳು ಜನರಿಗೆ ಹೇಗೆ ಉದ್ಯೋಗಾವಕಾಶಗಳನ್ನು ಒದಗಿಸಲಿದೆಯೆಂಬುದನ್ನು ಮುಂದಿನ ಒಂದೆರಡು ವರ್ಷಗಳಲ್ಲಿ ಇತರ ರಾಜ್ಯ ಸರಕಾರಗಳು ಕೂಡಾ ದಿಲ್ಲಿ ಆಡಳಿತದಿಂದ ಕಲಿತುಕೊಳ್ಳಲಿವೆ ಎಂದವರು ಹೇಳಿದರು.

ಸರಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಸರಕಾರವು 1900 ಕೋಟಿ ರೂ. ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಮೊಹಲ್ಲಾ ಕ್ಲಿನಿಕ್‌ಗಳು ಹಾಗೂ ಪಾಲಿಕ್ಲಿನಿಕ್‌ಗಳಿಗಾಗಿ 475 ಕೋಟಿ ರೂ. ಮೀಸಲಿಡಲಾಗಿದೆ ಎಂದು ಸಿಸೋಡಿಯಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News