ಇಂಧನ ಬೆಲೆ ಏರಿಕೆ ವಿರುದ್ಧ ವಿಶಿಷ್ಟ ರೀತಿಯ ಪ್ರತಿಭಟನೆಗೆ ಕಾಂಗ್ರೆಸ್ ಕರೆ
ಹೊಸದಿಲ್ಲಿ: ಪೆಟ್ರೋಲ್, ಡೀಸೆಲ್ ಬೆಲೆಗಳ ನಿರಂತರ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಾರ್ವಜನಿಕರ ಕಣ್ಣಿಗೆ ಮಣ್ಣೆರಚುವ ಕ್ರಮವನ್ನು ನಿಲ್ಲಿಸಬೇಕೆಂದು ಆಗ್ರಹಿಸಿದೆ.
ಅಲ್ಲದೆ, ಮಾರ್ಚ್ 31 ರಂದು ಇಂಧನ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ ಎಂದು ndtv.com ವರದಿ ಮಾಡಿದೆ.
ಮಾರ್ಚ್ 31 ರಂದು ಬೆಳಗ್ಗೆ 11 ಗಂಟೆಗೆ ಜನರು ತಮ್ಮ ತಮ್ಮ ಮನೆಗಳ ಮುಂಭಾಗದಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗ್ಯಾಸ್ ಸಿಲಿಂಡರ್‌ಗಳೊಂದಿಗೆ ಹಾಗೂ ಡ್ರಮ್ ಬಾರಿಸಿ ಇಂಧನ ಬೆಲೆ ಏರಿಕೆ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಇಂದು ಹೇಳಿದ್ದಾರೆ.
ಕಾಂಗ್ರೆಸ್ ನ ನಾಯಕ ರಾಹುಲ್ ಗಾಂಧಿ ಕೂಡಾ ಬೆಲೆ ಏರಿಕೆ ವಿರುದ್ಧ ಕೇಂದ್ರದ ವಿರುದ್ಧ ಹರಿಹಾಯ್ದಿದ್ದು, 'ಜನರು ಹಣದುಬ್ಬರದಿಂದ ತತ್ತರಿಸುತ್ತಿರುವಾಗ ರಾಜ ಅರಮನೆಗೆ ತಯಾರಿ ನಡೆಸುತ್ತಿದ್ದಾನೆ' ಎಂದು ಟೀಕಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಶನಿವಾರ ಲೀಟರ್‌ಗೆ ತಲಾ 80 ಪೈಸೆ ಹೆಚ್ಚಿಸಲಾಗಿದೆ, ಕಳೆದ ಐದು ದಿನಗಳಲ್ಲಿ ಇದು ನಾಲ್ಕನೇ ಹೆಚ್ಚಳವಾಗಿದೆ.