ಚೀನಾ: ಪತನಗೊಂಡ ವಿಮಾನದ 132 ಪ್ರಯಾಣಿಕರಲ್ಲಿ ಒಬ್ಬರೂ ಬದುಕುಳಿದಿಲ್ಲ; ವರದಿ

Update: 2022-03-26 17:36 GMT

ಬೀಜಿಂಗ್:‌ ಸೋಮವಾರ ದಕ್ಷಿಣ ಚೀನಾದಲ್ಲಿ ಅಪಘಾತಕ್ಕೀಡಾದ ಚೀನಾ ಈಸ್ಟರ್ನ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 132 ಜನರಲ್ಲಿ ಯಾರೂ ಬದುಕುಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

"ಸ್ಥಳದಿಂದ ತೆಗೆದ ಡಿಎನ್ಎ ಮಾದರಿಗಳಲ್ಲಿ ಒಟ್ಟು 120 ಜನರನ್ನು ಗುರುತಿಸಲಾಗಿದೆ" ಎಂದು ಚೀನಾದ ಗುವಾಂಗ್ಕ್ಸಿ ಪ್ರದೇಶದ ಅಗ್ನಿಶಾಮಕ ಮತ್ತು ರಕ್ಷಣಾ ವಿಭಾಗದ ಮುಖ್ಯಸ್ಥ ಜೆಂಗ್ ಕ್ಸಿ ಹೇಳಿದ್ದಾರೆ.

ಚೀನಾ ಈಸ್ಟರ್ನ್ ಏರ್‌ಲೈನ್ಸ್‌ನ 132 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬೋಯಿಂಗ್ 737 ವಿಮಾನವು ಸೋಮವಾರ ಗುವಾಂಗ್‌ಕ್ಸಿ ಪ್ರದೇಶದ ವುಝೌ ನಗರದ ಬಳಿ ಪತನಗೊಂಡಿತ್ತು. ಅಪಘಾತದಿಂದ ಬದುಕುಳಿದವರ ಬಗ್ಗೆ ಯಾವ ಸುಳಿವು ಕೂಡಾ ಸಿಕ್ಕಿರಲಿಲ್ಲ. 30 ವರ್ಷಗಳಲ್ಲಿ ಚೀನಾದಲ್ಲಿ ಸಂಭವಿಸಿದ ಅತ್ಯಂತ ಭೀಕರ ವಿಮಾನ ಅಪಘಾತ ಇದು ಎನ್ನಲಾಗಿದೆ.

ಮಾರ್ಚ್ 23 ರಂದು ವಿಮಾನದಿಂದ ʼಫ್ಲೈಟ್ ರೆಕಾರ್ಡರ್ʼ ಅನ್ನು ಪತ್ತೆ ಹಚ್ಚಲಾಗಿದ್ದರೂ, ಅಪಘಾತದ ತೀವ್ರತೆಗೆ ರೆಕಾರ್ಡರ್‌ ತೀವ್ರವಾಗಿ ಹಾನಿಯಾಗಿದೆ ಎಂದು ವರದಿಯಾಗಿದೆ. ವಿಮಾನದ ಎರಡನೇ ಬ್ಲ್ಯಾಕ್‌ ಬಾಕ್ಸ್‌ ಅನ್ನು ಅಧಿಕಾರಿಗಳು ಇನ್ನೂ ಪತ್ತೆ ಮಾಡಿಲ್ಲ.

ಹೀಗಾಗಿ, ಇದುವರೆಗೂ ವಿಮಾನ ಅಪಘಾತಕ್ಕೆ ಕಾರಣ ಏನು ಅನ್ನುವುದು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ, ಅಮೇರಿಕಾ ಮೂಲದ ವಿಮಾನಯಾನ ಸಂಸ್ಥೆ ಬೋಯಿಂಗ್, ಚೀನಾದ ವಿಮಾನಯಾನ ಸಂಸ್ಥೆಗೆ ಸಹಾಯ ಮಾಡಲು ಸಿದ್ಧವಾಗಿದೆ ಮತ್ತು ಅಪಘಾತದ ಬಗ್ಗೆ ಯುನೈಟೆಡ್ ಸ್ಟೇಟ್ಸ್‌ನ ಸಾರಿಗೆ ಸುರಕ್ಷತಾ ನಿಯಂತ್ರಕರೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News