ಭಟ್ಕಳ: ಪುರಸಭಾ ಮಾಸಿಕ ಸಭೆಯಲ್ಲಿ ತೆರಿಗೆ ಹಚ್ಚಳಕ್ಕೆ ವಿರೋಧ; ಪಟ್ಟಣದ ಸಮಸ್ಯೆಗಳ ಕುರಿತು ಚರ್ಚೆ

Update: 2022-03-26 18:15 GMT

ಭಟ್ಕಳ: ಪುರಸಭೆಯ ಅಧ್ಯಕ್ಷ ಪರ್ವೇಝ ಕಾಶೀಮಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆಯ ಮಾಸಿಕ ಸಭೆಯಲ್ಲಿ ಪಟ್ಟಣದ ಹಲವು ಸಮಸ್ಯೆಗಳ ಬಗ್ಗೆ ಸದಸ್ಯರು ಪ್ರಶ್ನೆಗಳನ್ನು ಕೇಳಿ ಚರ್ಚೆ ನಡೆಯಿತು.

ಸಭೆಯಲ್ಲಿ ಪುರಸಭೆಯ ಮುಖ್ಯಾಧಿಕಾರಿ ರಾಧಿಕಾ ಎಸ್ ಅವರು ಆಸ್ತಿ ತೆರಿಗೆಯನ್ನು ಶೇ.3 ರಿಂದ 5ರ ತನಕ ಹೆಚ್ಚಿಸಲು ಸರಕಾರ ಆದೇಶ ಮಾಡಿದೆ. ನಾವು ಕನಿಷ್ಟ ಶೇ.3ರಷ್ಟು ತೆರಿಗೆ ಹೆಚ್ಚಿಸಬೇಕೆಂದು ಸಭೆಯಲ್ಲಿ ಸದಸ್ಯರ ಗಮನಕ್ಕೆ ತಂದಾಗ, ಸದಸ್ಯ ಅಲ್ತಾಪ್ ಖರೂರಿ ಸೇರಿದಂತೆ ಇತರರು ಹೆಚ್ಚಿನ ಸದಸ್ಯರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆಡಳಿತಾಧಿಕಾರಿಯವರ ಅವಧಿಯಲ್ಲಿ ಶೇ. 15ರಷ್ಟು ತೆರಿಗೆ ಏರಿಕೆ ಮಾಡಲಾಗಿದ್ದು, ಇದೀಗ ಮತ್ತೆ ಶೇ.3ರಷ್ಟು ಏರಿಕೆ ಮಾಡುವುದರಿಂದ ಜನರ ಮೇಲೆ ಹೊರೆ ಬೀಳಲಿದೆ. ಕೊರೋನ ಮತ್ತಿತರ ಕಾರಣದಿಂದ ಜನರು ತೊಂದರೆಗೀಡಾಗಿದ್ದಾರೆ. ವ್ಯಾಪಾರ ವಹಿವಾಟು ಕುಂಠಿತವಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಆಸ್ತಿ ತೆರಿಗೆ ಏರಿಸುವುದಕ್ಕೆ ನಮ್ಮೆಲ್ಲರ ವಿರೋಧವಿದೆ. ಬೇಕಾದರೆ ಮುಂದಿನ ವರ್ಷ ತೆರಿಗೆ ಏರಿಕೆ ಮಾಡಿ ಎಂದು ಸದಸ್ಯ ಅಲ್ತಾಪ್ ಖರೂರಿ ಹೇಳಿದರು. ಸರಕಾರದ ಆದೇಶದಂತೆ ತೆರಿಗೆ ಏರಿಕೆ ಮಾಡದಿದ್ದರೆ ಪುರಸಭೆಗೆ ಬರುವ ಅನುದಾನದಲ್ಲಿ ಕುಂಠಿತವಾಗುತ್ತದೆ. ಮೇಲಾಧಿಕಾರಿಗಳಿಂದ ಕಾರಣ ಕೇಳಿ ಶೋಕಾಸ್ ನೋಟೀಸು ಬರಲಿದೆ. ಶೇ. 3ರಷ್ಟು ತೆರಿಗೆ ಏರಿಕೆ ಮಾಡಿದರೆ ಯಾರಿಗೂ ಹೊರೆ ಆಗುವುದಿಲ್ಲ ಎಂದು ಮುಖ್ಯಾಧಿಕಾರಿ ರಾಧಿಕಾ ಅವರು ಸದಸ್ಯರ ಮನವೊಲಿಸಲು ಯತ್ನಿಸಿದರೂ ಸಹ ಪಟ್ಟು ಬಿಡದ ಸದಸ್ಯರು ತೆರಿಗೆ ಏರಿಕೆ ಪ್ರಸ್ತಾಪ ಈ ವರ್ಷ ಬೇಡವೇ ಬೇಡ ಎಂದು ಹೇಳಿ ಕೈ ಎತ್ತುವುದರ ಮೂಲಕ ತೆರಿಗೆ ಏರಿಕೆಗೆ ವಿರೋಧಿಸಿದರು. ಹೆಚ್ಚಿನ ಸದಸ್ಯರು ತೆರಿಗೆ ಏರಿಕೆ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಅಧ್ಯಕ್ಷರು ತೆರಿಗೆ ಏರಿಕೆಯನ್ನು ಕೈಬಿಟ್ಟರು.

ಪಟ್ಟಣದಲ್ಲಿ ಒಂದೇ ಸಿನಿಮಾ ಮಂದಿರವಿದ್ದರೂ ಸಮರ್ಪಕ ಸ್ವಚ್ಛತೆ ಇಲ್ಲವಾಗಿದೆ. ಇದರಿಂದ ಸಿನಿಮಾ ವೀಕ್ಷಿಸುವ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದ್ದು, ಸೂಕ್ತವಾಗಿ ಪುರಸಭೆಯಿಂದ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಸದಸ್ಯ ಶ್ರೀಕಾಂತ ನಾಯ್ಕ ಅವರು ಅಧ್ಯಕ್ಷರು, ಮುಖ್ಯಾಧಿಕಾರಿಗೆ ಚಿತ್ರ ಸಹಿತ ಆಗ್ರಹಿಸಿದಾಗ, ಅಧ್ಯಕ್ಷರು ಪುರಸಭೆಯ ಅಧಿಕಾರಿಗಳಿಗೆ ನಾಳೆಯೇ ಸಿನೆಮಾ ಮಂದಿರಕ್ಕೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿ. ಚಿತ್ರಮಂದಿರದ ತೆರಿಗೆ ಬಾಕಿ ಇದ್ದರೆ ವಸೂಲಿಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. 

ಮಳೆಗಾಲ ಸಮೀಪಿಸುತ್ತಿರುವುದರಿಂದ ಗಟಾರ ಸ್ವಚ್ಛತೆ ತೀರಾ ಅಗತ್ಯವಾಗಿದೆ. ಈ ಸಲ ಎಲ್ಲಾ ವಾರ್ಡುಗಳ ಗಟಾರ ಸ್ವಚ್ಛತೆಗೂ ಆದ್ಯತೆ ನೀಡಬೇಕೆಂದು ಸದಸ್ಯರು ಆಗ್ರಹಿಸಿದಾಗ, ಅಧ್ಯಕ್ಷರು ಎಲ್ಲಾ ವಾರ್ಡುಗಳಲ್ಲಿ ಗಟಾರದ ಸ್ವಚ್ಛತೆ ಮಾಡಿದರೆ 25 ಲಕ್ಷ ವೆಚ್ಚ ತಗಲುತ್ತದೆ. ನೀರು ನಿಲ್ಲುವ ಪ್ರಮುಖ ಸ್ಥಳದಲ್ಲಿ ಮೊದಲು ಸ್ವಚ್ಛತೆ ಕೈಗೊಂಡು ನಂತರ ವಾರ್ಡುಗಳಲ್ಲಿ ಗಟಾರ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು. 

ಉಪಾಧ್ಯಕ್ಷ ಮೊಹ್ಮದ್ ಕೈಸರ್ ಮಾತನಾಡಿ, ಕಳೆದ ವರ್ಷ ಗಟಾರ ಸ್ವಚ್ಛತೆ ಸರಿಯಾಗಿ ಮಾಡಿಲ್ಲ. ಮಳೆಗಾಲದಲ್ಲಿ ಎಲ್ಲಾ ಕಡೆ ನೀರು ನಿಂತು ಜನರು ತೊಂದರೆ ಅನುಭವಿಸಿದ್ದಾರೆ. ಈ ಸಲ ಗಟಾರ ಸ್ವಚ್ಛತೆ ಸರಿಯಾಗಿ ಆಗಬೇಕೆಂದರು. 

ಹಿರಿಯ ಆರೋಗ್ಯ ನಿರೀಕ್ಷಕಿ ಸುಜಿಯಾ ಸೋಮನ್, ಇಂಜಿನಿಯರ್ ಉಮೇಶ ಅವರು ಪಟ್ಟಣದ 6 ಕಡೆ ಮಳೆಗಾಲದಲ್ಲಿ ಹೆಚ್ಚು ನೀರು ನಿಲ್ಲುತ್ತಿದ್ದು, ಈ ಪ್ರದೇಶದಲ್ಲಿ ಮೊದಲು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು. 
ಪುರಸಭೆಯಲ್ಲೇ ಟಿಪ್ಪರ್, ಟ್ರ್ಯಾಕ್ಟರ್ ಎಲ್ಲವೂ ಇರುವುದರಿಂದ ಕೆಲಸಗಾರರನ್ನು ಹಾಕಿಕೊಂಡು ಸ್ವಚ್ಛತೆ ಕೈಗೊಳ್ಳಬೇಕು. ಈ ಸಲ ಮಳೆಗಾಲದಲ್ಲಿ ಯಾವುದೇ ತೊಂದರೆ ಆಗದಂತೆ ಗಮನಹರಿಸಬೇಕೆಂದು ಉಪಾಧ್ಯಕ್ಷ ಕೈಸರ್ ಸೂಚಿಸಿದರು. 

ಹೆದ್ದಾರಿ ಕೆಲಸ ನಡೆಯುತ್ತಿರುವುದರಿಂದ ಕೆಲವು ಕಡೆ ನೀರು ಮನೆಗಳಿಗೆ ನುಗ್ಗುತ್ತಿವೆ. ಈ ಬಗ್ಗೆ ಹೆದ್ದಾರಿ ನಿಗಮದ ಅಧಿಕಾರಿಗಳಿಗೆ ಮಳೆಗಾಲದ ಪೂರ್ವದಲ್ಲೇ ಕ್ರಮ ಕೈಗೊಳ್ಳುವಂತೆ ಪುರಸಭೆ ತಿಳಿಸಬೇಕೆಂದು ಅಲ್ತಾಪ್ ಖರೂರಿ ಆಗ್ರಹಿಸಿದರು. ಆಸರಕೇರಿಯಲ್ಲಿ ಕೆಲವು ಕಡೆ ಒಳಚರಂಡಿ ನೀರು ಕುಡಿಯುವ ನೀರಿನ ಬಾವಿಗೆ ಸೇರಿದ್ದರಿಂದ ನೀರು ಕುಡಿಯಲು ಯೋಗ್ಯವೇ ಎಂದು ಪರೀಕ್ಷೆಗೆ ಕಳುಹಿಸಬೇಕೆಂದು ಶ್ರೀಕಾಂತ ನಾಯ್ಕ ಒತ್ತಾಯಿಸಿದರು. 

ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚಿಸಿ ಪರಿಹಾರಕ್ಕೆ ಸೂಚಿಸಲಾಯಿತು. ಪುರಸಭೆ ಸದಸ್ಯರು, ಯೋಜನಾಧಿಕಾರಿ ವೇಣುಗೋಪಾಲ ಶಾಸ್ತ್ರಿ ಮತ್ತಿತರ ಅಧಿಕಾರಿಗಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News