ಉಕ್ರೇನ್ ವಿರುದ್ಧದ ದಾಳಿಯಲ್ಲಿ 7 ರಷ್ಯನ್ ಜನರಲ್‍ಗಳು ಬಲಿ: ವರದಿ
ಲಂಡನ್ : ಉಕ್ರೇನ್ ವಿರುದ್ಧ ರಷ್ಯಾ ನಡೆಸಿದ ಅತಿಕ್ರಮಣದ ವೇಳೆ ರಷ್ಯಾ ಸೇನೆಯ ಏಳು ಮಂದಿ ಜನರಲ್‍ಗಳು ಮೃತಪಟ್ಟಿದ್ದಾರೆ ಎಂದು ಪಾಶ್ಚಿಮಾತ್ಯ ದೇಶಗಳ ಅಧಿಕಾರಿಗಳು ಬಹಿರಂಗಪಡಿಸಿದ್ದು, ಅವರ ಹೆಸರುಗಳನ್ನು ಪ್ರಕಟಿಸಿದೆ.
ರಷ್ಯಾದ 49ನೇ ಸಂಯುಕ್ತ ಸಶಸ್ತ್ರ ಪಡೆಗಳ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಯಾಕೋವ್ ರೆಝಂಟೇವ್ ಮೃತಪಟ್ಟ ಕೊನೆಯ ಜನರಲ್. ದಕ್ಷಿಣ ಮಿಲಿಟರಿ ಜಿಲ್ಲೆಯಲ್ಲಿ ಇವರು ಬಲಿಯಾಗಿದ್ದಾರೆ ಎಂದು ಶುಕ್ರವಾರ ಅಧಿಕಾರಿಗಳು ಹೇಳಿದ್ದಾರೆ.
ರಷ್ಯಾದ ಸೇನೆಯ 6ನೇ ಸಂಯುಕ್ತ ಸಶಸ್ತ್ರ ಸೇನೆಯ ಕಮಾಂಡರ್ ಜನರಲ್ ವ್ಲಾಸಿಲೋವ್ ಯೆರ್ಶೋವ್ ಅವರನ್ನು ಈ ವಾರದ ಆರಂಭದಲ್ಲಿ ಕ್ರೆಮ್ಲಿನ್ ವಜಾಗೊಳಿಸಿತ್ತು. ರಷ್ಯಾ ಸೇನೆ ಒಂದು ತಿಂಗಳಿಂದ ನಡೆಸುತ್ತಿರುವ ಯುದ್ಧದಲ್ಲಿ ಇವರ ತಪ್ಪು ನಿರ್ಣಯಗಳು ಮತ್ತು ವೈಫಲ್ಯಗಳ ಕಾರಣದಿಂದ ಭಾರಿ ಹಾನಿ ಆಗಿರುವ ಹಿನ್ನೆಲೆಯಲ್ಲಿ ಅವರನ್ನು ವಜಾಗೊಳಿಸಲಾಗಿದೆ ಎಂದು ಹೇಳಲಾಗಿದೆ.
ರಷ್ಯಾದ 37ನೇ ಮೋಟರ್ ರೈಫಲ್ ಬ್ರಿಗೇಡ್‍ನ ಕಮಾಂಡರ್ ಅವರನ್ನು ಅವರದ್ದೇ ಪಡೆಯ ಸೈನಿಕರು ಟ್ಯಾಂಕರ್ ಹರಿಸಿ ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಪಡೆಯಲ್ಲಿ ವ್ಯಾಪಕ ಸಾವು ನೋವು ಸಂಭವಿಸಿದ್ದರಿಂದ ಅವರ ಸಿಬ್ಬಂದಿಯೇ ಅವರನ್ನು ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ. ರಷ್ಯಾ ಸೈನಿಕರು ಎದುರಿಸುತ್ತಿರುವ ನೈತಿಕ ಸವಾಲಿನ ಪ್ರತೀಕ ಎಂದು ಘಟನೆಯನ್ನು ವಿಶ್ಲೇಷಿಸಲಾಗುತ್ತಿದೆ.
ಮೃತಪಟ್ಟ ಇತರ ಅಧಿಕಾರಿಗಳಲ್ಲಿ ವ್ಲಾದಿಮಿರ್ ಪುಟಿನ್ ಅವರಿಂದ ನಿಯೋಜಿತಾಗಿರುವ ಚೆಚನ್ ವಿಶೇಷ ಪಡೆಯ ಜನರಲ್ ಮಗೊಮೆದ್ ತುಶೇವ್ ಸೇರಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಉನ್ನತ ಅಧಿಕಾರಿಗಳು ಹತ್ಯೆಯಾಗಿರುವುದು ಪಾಶ್ಚಿಮಾತ್ಯ ಸೇನಾ ಮತ್ತು ಭದ್ರತಾ ಪಡೆಗಳಿಗೆ ಆಘಾತ ತಂದಿದೆ. ಇದಕ್ಕೆ ಸಂವಹನ ಮತ್ತು ಲಾಜಿಸ್ಟಿಕ್ ಸಮಸ್ಯೆಗಳು ಕಾರಣ ಎಂದು ಹೇಳಲಾಗುತ್ತಿದೆ. ಉನ್ನತ ಅಧಿಕಾರಿಗಳು ಅನ್‍ಎನ್‍ಕ್ರಿಪ್ಟೆಡ್ ವಾಹಿನಿಗಳನ್ನು ಸಂವಹನಕ್ಕೆ ಬಳಸಿರುವುದರಿಂದ ಉಕ್ರೇನ್ ಪಡೆಗಳಿಗೆ ಈ ಮಾಹಿತಿಗಳು ಬಹಿರಂಗಗೊಂಡಿವೆ ಎಂದು ಹೇಳಲಾಗಿದೆ.
ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಕೇವಲ 1300 ಮಂದಿ ಸೈನಿಕರು ಮಾತ್ರ ಮೃತಪಟ್ಟಿರುವುದಾಗಿ ಕ್ರೆಮ್ಲಿನ್ ಹೇಳಿಕೊಂಡಿದೆ. ಆದರೆ ಸಾವಿನ ಪ್ರಮಾಣ ಇದರ ನಾಲ್ಕರಿಂದ ಐದು ಪಟ್ಟು ಅಧಿಕ ಇರಬಹುದು ಎಂದು ಅಂದಾಜಿಸಲಾಗಿದೆ. ರಷ್ಯಾ ನಿಯೋಜಿಸಿರುವ 115-120 ಬೆಟಾಲಿಯನ್‍ಗಳ ಪೈಕಿ ಸುಮಾರು 20 ಬೆಟಾಲಿಯನ್‍ಗಳಲ್ಲಿ ವ್ಯಾಪಕ ಸಾವು ನೋವು ಸಂಭವಿಸಿದ್ದು, ಅವರು ಪರಿಣಾಮಕಾರಿಯಾಗಿ ಯುದ್ಧ ಮಾಡುವ ಸ್ಥಿತಿಯಲ್ಲಿಲ್ಲ ಎಂದು ಪಾಶ್ಚಿಮಾತ್ಯ ತಜ್ಞರು ಅಂದಾಜಿಸಿದ್ದಾರೆ.