ಪತನಗೊಂಡ ಚೀನ ವಿಮಾನದ ಎರಡೂ ಬ್ಲ್ಯಾಕ್ ಬಾಕ್ಸ್ ಗಳು ಪತ್ತೆ
ಬೀಜಿಂಗ್, ಮಾ. 27: ಕಳೆದ ಸೋಮವಾರ ಪರ್ವತವೊಂದರಲ್ಲಿ ಪತನಗೊಂಡಿದ್ದ ಚೀನಾ ಈಸ್ಟರ್ನ್ ಏರ್ಲೈನ್ಸ್ ವಿಮಾನದ ಎರಡನೇ ಕಪ್ಪು ಬಾಕ್ಸನ್ನು ತನಿಖಾಧಿಕಾರಿಗಳು ರವಿವಾರ ಪತ್ತೆ ಹಚ್ಚಿದ್ದಾರೆ ಎಂದು ಸರಕಾರಿ ಮಾಧ್ಯಮಗಳು ವರದಿ ಮಾಡಿವೆ.
ವಿಮಾನದ ಫ್ಲೈಟ್ ಡಾಟಾ ರೆಕಾರ್ಟರ್ (ಎಫ್ಡಿಆರ್)ನ್ನು ಪತನಗೊಂಡ ಸ್ಥಳದಲ್ಲಿ ರವಿವಾರ ಪತ್ತೆಹಚ್ಚಲಾಯಿತು. ಬುಧವಾರ ಇನ್ನೊಂದು ಬ್ಲಾಕ್ ಬಾಕ್ಸ್ ಕಾಕ್ಪಿಟ್ ವಾಯ್ಸ್ ರೆಕಾರ್ಡರ್ (ಸಿವಿಆರ್)ನ್ನು ಪತ್ತೆಹಚ್ಚಲಾಗಿತ್ತು.
ಚೀನಾದ ಯುನ್ನಾನ್ ಪ್ರಾಂತದ ರಾಜಧಾನಿ ಕುನ್ಮಿಂಗ್ನಿಂದ ಗ್ವಾಂಗ್ಡಾಂಗ್ ಪ್ರಾಂತದ ರಾಜಧಾನಿ ಗ್ವಾಂಗ್ಝೂಗೆ ಹಾರುತ್ತಿದ್ದವಿಮಾನದಲ್ಲಿ 132 ಮಂದಿ ಪ್ರಯಾಣಿಸುತ್ತಿದ್ದರು. ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ.
ವಿಮಾನವು ಕೊನೆಯ ಕ್ಷಣಗಳಲ್ಲಿ ನಿಮಿಷಕ್ಕೆ 31,000 ಅಡಿ ವೇಗದಲ್ಲಿ ಆಕಾಶದಿಂದ ಕೆಳಗೆ ಧಾವಿಸಿ ಪರ್ವತಕ್ಕೆ ಪತನಗೊಂಡಿತ್ತು. ವಿಮಾನವು ಪರ್ವತಕ್ಕೆ ಅಪ್ಪಳಿಸಿದ ಬಳಿಕ ಚೂರು ಚೂರಾಗಿ ಪತನದಿಂದ ಹುಟ್ಟಿಕೊಂಡ ಬೆಂಕಿಯಲ್ಲಿ ಸುಟ್ಟು ಹೋಗಿದೆ.