ಉಡುಪಿ ಜಿಲ್ಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆ ಶಾಂತಿಯುತ: ಡಿಸಿ ಕೂರ್ಮಾರಾವ್

Update: 2022-03-28 15:15 GMT

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಎಲ್ಲ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಮೊದಲ ದಿನ ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತಿಯುತವಾಗಿ ಎಸೆಸೆಲ್ಸಿ ಪರೀಕ್ಷೆ ನಡೆದಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.

ಪರೀಕ್ಷೆಯಲ್ಲಿ 12 ವಿದ್ಯಾರ್ಥಿಗಳು ವಿಶೇಷ ಕೊಠಡಿಗಳಲ್ಲಿ ಪರೀಕ್ಷೆ ಬರೆದಿದ್ದು, ಕೋವಿಡ್ ಕೇರ್ ಸೆಂಟರ್‌ನಲ್ಲಿ ಯಾವುದೇ ವಿದ್ಯಾರ್ಥಿಗಳು ಪರೀಕ್ಷೆ ಬರೆದಿಲ್ಲ. ಜಿಲ್ಲೆಯ ಯಾವುದೇ ಕೇಂದ್ರಗಳಲ್ಲಿ ಅವ್ಯವಹಾರಗಳು ನಡೆದಿಲ್ಲ. ೧೭ ಪರೀಕ್ಷಾ ಕೇಂದ್ರಗಳಲ್ಲಿ ಶೂನ್ಯ ಗೈರು ಹಾಜರಾತಿ ಕಂಡುಬಂದಿದೆ. ಪರೀಕ್ಷಾ ಕೇಂದ್ರಗಳಲ್ಲಿ ಶಿಕ್ಷಕರು ತತ್ಪರತೆಯಿಂದ ಕಾರ್ಯನಿರ್ವಹಿಸಿದ್ದಾರೆ ಎಂದರು.

ಕೇಂದ್ರಕ್ಕೆ ಡಿಸಿ ಭೇಟಿ: ಉಡುಪಿ ಬೋರ್ಡ್ ಹೈಸ್ಕೂಲು ಸೇರಿದಂತೆ ಕೆಲವು ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಭೇಟಿ ನೀಡಿ ವಿದ್ಯಾರ್ಥಿ ಗಳಿಗೆ ಉತ್ತಮವಾಗಿ ಪರೀಕ್ಷೆ ಬರೆಯುವಂತೆ ಧೈರ್ಯ ತುಂಬಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆ ಯಲ್ಲಿ ಸರಕಾರದ ಮಾರ್ಗಸೂಚಿಯಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಕೇಂದ್ರಗಳ ೨೦೦ ಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ ೧೪೪ ಜಾರಿ ಮಾಡಲಾಗಿದೆ. ಸರಕಾರದ ಸುತ್ತೋಲೆಯಂತೆ ಇಲಾಖೆ ಕ್ರಮ ತೆಗೆದುಕೊಂಡಿದ್ದು, ಯಾವುದೇ ಗೊಂದಲ ಇಲ್ಲದಂತೆ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಧಾರ್ಮಿಕ ಮುಖಂಡರು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿರುವುದು ಅಭಿನಂದನೀಯ. ಭವಿಷ್ಯ ದೃಷ್ಠಿಯಿಂದ ಎಲ್ಲ ಮಕ್ಕಳನ್ನು ಪರೀಕ್ಷೆಗೆ ಕಳುಹಿಸಬೇಕು ಎಂದರು.

ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ವೈ. ನವೀನ್ ಭಟ್ ವಳಕಾಡು ಸರಕಾರಿ ಶಾಲೆಯಲ್ಲಿರುವ ಎಸೆಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ನಾಪತ್ತೆ