×
Ad

ಇಸ್ರೇಲ್ ಪ್ರಧಾನಿಗೆ ಕೋವಿಡ್ ಸೋಂಕು ದೃಢ: ಭಾರತ ಪ್ರವಾಸ ಮುಂದೂಡಿಕೆ ಸಾಧ್ಯತೆ

Update: 2022-03-28 23:06 IST

ಜೆರುಸಲೇಂ, ಮಾ.28: ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿರುವುದಾಗಿ ಇಸ್ರೇಲ್ ಪ್ರಧಾನಿಯವರ ಕಚೇರಿ ಸೋಮವಾರ ಹೇಳಿಕೆ ನೀಡಿದೆ. ಎಪ್ರಿಲ್ 1ರಿಂದ 3ರವರೆಗೆ ಭಾರತಕ್ಕೆ ಭೇಟಿ ನೀಡುವ ಬೆನೆಟ್ ಅವರ ಕಾರ್ಯಕ್ರಮ ಇದೀಗ ಅನಿಶ್ಚಿತತೆಯಲ್ಲಿದೆ ಎಂದು ವರದಿಯಾಗಿದೆ.

 ಪ್ರಧಾನಿಯವರು ಆರೋಗ್ಯವಾಗಿದ್ದು ಮನೆಯಲ್ಲಿಯೇ ಪ್ರತ್ಯೇಕವಾಗಿದ್ದುಕೊಂಡು ತಮ್ಮ ಕಾರ್ಯವನ್ನು ಮುಂದುವರಿಸಿದ್ದಾರೆ ಎಂದು ಕಚೇರಿಯ ಹೇಳಿಕೆ ತಿಳಿಸಿದೆ. ಆದರೆ ಮುಂಬರುವ ಭಾರತ ಭೇಟಿ ಕಾರ್ಯಕ್ರಮ ನಿಗದಿಯಂತೆಯೇ ನಡೆಯಲಿದೆಯೇ ಅಥವಾ ಮುಂದೂಡಲಾಗುವುದೇ ಎಂಬ ಬಗ್ಗೆ ಇಸ್ರೇಲ್ ಸರಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಇಸ್ರೇಲ್-ಭಾರತ ದ್ವಿಪಕ್ಷೀಯ ಸಂಬಂಧದ 30ನೇ ವರ್ಷಾಚರಣೆ ಅಂಗವಾಗಿ ಇಸ್ರೇಲ್ ಪ್ರಧಾನಿ ಭಾರತಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದೆ. ವೇಳಾಪಟ್ಟಿಯಂತೆ ಅವರು ಎಪ್ರಿಲ್ 2ರಂದು ಇಸ್ರೇಲ್‌ನಿಂದ ಹೊರಡಲಿದ್ದಾರೆ. ಇಸ್ರೇಲ್‌ನಲ್ಲಿನ ಆರೋಗ್ಯ ಮಾರ್ಗಸೂಚಿ ಪ್ರಕಾರ ಕೋವಿಡ್ ಪೊಸಿಟಿವ್ ವರದಿ ಬಂದ ಬಳಿಕದ 5ನೇ ದಿನವಾದ ಎಪ್ರಿಲ್ 1ರಂದು ನಡೆಸುವ ಮತ್ತೊಂದು ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದರೆ ಅವರ ಕಾರ್ಯಕ್ರಮ ನಿಗದಿತ ರೀತಿಯಲ್ಲಿಯೇ ಮುಂದುವರಿಯಲಿದೆ. ಒಂದು ವೇಳೆ ಮತ್ತೆ ಪೊಸಿಟಿವ್ ವರದಿ ಬಂದರೆ ಮತ್ತೆ 7 ದಿನ ಪ್ರತ್ಯೇಕವಾಗಿರಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರೋಗ್ಯ ಎಲ್ಲದಕ್ಕಿಂತಲೂ ಮುಖ್ಯವಾಗಿದೆ. ಜಾಗರೂಕತೆ ವಹಿಸಿ, ಕ್ಷಿಪ್ರವಾಗಿ ಚೇತರಿಸಿಕೊಳ್ಳಿ ಎಂದು ಮಾಜಿ ಪ್ರಧಾನಿ, ಪ್ರಮುಖ ವಿಪಕ್ಷ ಮುಖಂಡ ಬೆಂಜಮಿನ್ ನೆತನ್ಯಾಹು ಟ್ಬೀಟ್ ಮಾಡಿದ್ದಾರೆ. ಈ ಮಧ್ಯೆ, ರವಿವಾರ ಪ್ರಧಾನಿ ಬೆನೆಟ್ ಜತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪೊಲೀಸ್ ವಿಭಾಗದ ಮುಖ್ಯಸ್ಥ ಕೊಬಿ ಶಬ್ತಾಯ್ ಅವರಿಗೂ ಕೊರೋನ ಸೋಂಕು ದೃಢಪಟ್ಟಿದೆ ಎಂದು ಇಸ್ರೇಲ್‌ನ ಆರೋಗ್ಯ ಇಲಾಖೆ ದೃಢಪಡಿಸಿದೆ. ಇಸ್ರೇಲ್‌ನಲ್ಲಿ ಒಮೈಕ್ರಾನ್ ಬಿಎ.2 ಪ್ರಬೇಧದ ಸೋಂಕಿನ ಪ್ರಕರಣ ತೀವ್ರವಾಗಿ ಉಲ್ಬಣಿಸಿದ್ದು ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 99,385ಕ್ಕೇರಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News