ಪರವಾನಿಗೆಯಿಲ್ಲದೇ ಬಂದೂಕು ಹೊಂದಲು ಕೊಡವರಿಗೆ ವಿನಾಯಿತಿ: ಕರ್ನಾಟಕ ಸರ್ಕಾರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

Update: 2022-03-29 14:05 GMT
Photo: /twitter./bhatinmaai

ಹೊಸದಿಲ್ಲಿ: ಕೊಡವ ಜನಾಂಗದವರಿಗೆ ಮತ್ತು ಜುಮ್ಮಾ ಹಿಡುವಳಿದಾರರಿಗೆ ಪರವಾನಿಗೆ ಇಲ್ಲದೆ ಬಂದೂಕುಗಳನ್ನು ಹೊಂದಲು ಮತ್ತು ಸಾಗಿಸಲು ನೀಡಲಾದ ವಿನಾಯಿತಿಯ ಸಿಂಧುತ್ವವನ್ನು ಎತ್ತಿಹಿಡಿದ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಮಂಗಳವಾರ ಕರ್ನಾಟಕ ಸರ್ಕಾರದ ಪ್ರತಿಕ್ರಿಯೆ ಕೇಳಿದೆ ಎಂದು BarandBench.com  ವರದಿ ಮಾಡಿದೆ.

ನಿವೃತ್ತ ಸೇನಾ ಅಧಿಕಾರಿ ಕ್ಯಾಪ್ಟನ್ ಚೇತನ್ ವೈಕೆ ಸಲ್ಲಿಸಿದ ಅರ್ಜಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠ ವಿಚಾರಣೆ ನಡೆಸುತ್ತಿದೆ.
 
ಅಕ್ಟೋಬರ್ 29, 2019 ರಂದು, ಕೊಡವ ಸಮುದಾಯ ಮತ್ತು ಜುಮ್ಮಾ ಹಿಡುವಳಿದಾರರಿಗೆ ಶಸ್ತ್ರಾಸ್ತ್ರ ಕಾಯ್ದೆ, 1959 ರ ಕೆಲವು ನಿಬಂಧನೆಗಳಿಂದ ವಿನಾಯಿತಿ ನೀಡಿ ಕರ್ನಾಟಕ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿತ್ತು.

ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ, ಒಂದು ಸಮುದಾಯಕ್ಕೆ ಮಾತ್ರ ಏಕೆ ಈ ವಿನಾಯಿತಿ ನೀಡಲಾಗಿದೆ ಎಂದು ಚೇತನ್ ಪ್ರಶ್ನಿಸಿದ್ದಾರೆ  ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

 ಕೊಡವ ಸಮುದಾಯದ ಪರ ವಾದ ಮಂಡಿಸಿದ ಹಿರಿಯ ವಕೀಲರು, ಬ್ರಿಟಿಷರು ಭಾರತವನ್ನು ಆಳುತ್ತಿದ್ದಾಗಿನಿಂದ ಈ ವಿನಾಯಿತಿ ನೀಡಲಾಗಿದೆ ಎಂದು ವಾದಿಸಿದ್ದರು.

ಕಳೆದ ಸೆಪ್ಟೆಂಬರ್‌ನಲ್ಲಿ, ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಮತ್ತು ಎಸ್‌ಎಸ್ ಮಗದುಮ್ ಅವರ ಹೈಕೋರ್ಟ್ ಪೀಠವು ಸರ್ಕಾರದ ಅಧಿಸೂಚನೆಯನ್ನು ಎತ್ತಿಹಿಡಿದು ವಿನಾಯಿತಿಯನ್ನು ಮಾನ್ಯ ಮಾಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರ ಚೇತನ್‌ ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು. 
 
ಸರ್ಕಾರದ ಅಧಿಸೂಚನೆಯು ʼಜಾತಿ / ಜನಾಂಗ ಮತ್ತು ಪೂರ್ವಜರ ಭೂ ಹಿಡುವಳಿʼ ಆಧಾರದ ಮೇಲೆ ತಾರತಮ್ಯವನ್ನು ಸೃಷ್ಟಿಸುತ್ತದೆ ಎಂದು ಅವರು ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.


ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್ 41 ರ ಪ್ರಕಾರ, ಶಸ್ತ್ರಾಸ್ತ್ರ ಪರವಾನಗಿಯನ್ನು ಪಡೆಯುವುದರಿಂದ ವಿನಾಯಿತಿಯನ್ನು ʼಸಾರ್ವಜನಿಕ ಹಿತಾಸಕ್ತಿʼ ಯಲ್ಲಿ ಮಾತ್ರ ನೀಡಬಹುದು ಎಂದು ಚೇತನ್ ಅವರು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.


ʼಆದಾಗ್ಯೂ, ಕೊಡವ ಸಮುದಾಯಕ್ಕೆ ಅಂತಹ ವಿನಾಯಿತಿ ನೀಡುವ ಕುರಿತು ಅಧಿಸೂಚನೆಯಲ್ಲಿ ಯಾವುದೇ ಕಾರಣವನ್ನು ನೀಡಲಾಗಿಲ್ಲʼ ಎಂದು ಅವರು ನ್ಯಾಯಾಲಯಕ್ಕೆ ಹೇಳಿದ್ದಾರೆ .


ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಇದೀಗ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News