×
Ad

ಮಾತುಕತೆಗೆ ಉಕ್ರೇನ್ ಮುಂದಿರಿಸಿದ್ದ ಷರತ್ತಿನಿಂದ ಪುಟಿನ್ ಆಕ್ರೋಶ: ವರದಿ

Update: 2022-03-29 20:42 IST

ಸಾಂದರ್ಭಿಕ ಚಿತ್ರ
 

ಲಂಡನ್, ಮಾ.29: ಸಂಧಾನ ಮಾತುಕತೆಗೆ ಉಕ್ರೇನ್ ಮುಂದಿರಿಸಿದ್ದ ಷರತ್ತುಗಳನ್ನು ಓದಿದ್ದ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತೀವ್ರ ಆಕ್ರೋಶಗೊಂಡಿದ್ದರು . ಅವರನ್ನು (ಉಕ್ರೇನಿಯರನ್ನು) ಚಚ್ಚಿಹಾಕುವುದಾಗಿ ಅಬ್ಬರಿಸಿದ್ದರು ಎಂದು ಬ್ರಿಟನ್‌ನ ಮಾಧ್ಯಮ ವರದಿ ಮಾಡಿದೆ.
 ಉಕ್ರೇನ್ ಜತೆಗಿನ ಸಂಧಾನ ಮಾತುಕತೆಯಲ್ಲಿ ರಶ್ಯದ ಅನಧಿಕೃತ ಪ್ರತಿನಿಧಿಯಾಗಿರುವ ಉದ್ಯಮಿ ರೊಮನ್ ಅಬ್ರಮೊವಿಚ್ ಕಳೆದ ವಾರ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಬರೆದಿದ್ದ ಪತ್ರವನ್ನು ಪುಟಿನ್‌ಗೆ ಹಸ್ತಾಂತರಿಸಿದ್ದರು. ಯುದ್ಧ ಅಂತ್ಯಗೊಳ್ಳಲು ಉಕ್ರೇನ್ ಮುಂದಿರಿಸಿದ ಷರತ್ತುಗಳನ್ನು ಈ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಪತ್ರ ಓದಿದೊಡನೆ ಕ್ರೋಧಗೊಂಡ ಪುಟಿನ್, ಅವರನ್ನು (ಉಕ್ರೇನಿಯರನ್ನು) ಚಚ್ಚಿಹಾಕುವುದಾಗಿ ಅಬ್ಬರಿಸಿದರು ಎಂದು ಬ್ರಿಟನ್‌ನ ‘ದಿ ಟೈಮ್ಸ್’ ಪತ್ರಿಕೆ ವರದಿ ಮಾಡಿದೆ.

ಫೆಬ್ರವರಿ 24ರಂದು ಆರಂಭಗೊಂಡಿದ್ದ ಯುದ್ಧವನ್ನು ಸಮಾಪ್ತಿಗೊಳಿಸುವ ಸಂಧಾನ ಮಾತುಕತೆಗೆ ನೆರವಾಗಬೇಕೆಂಬ ಉಕ್ರೇನ್‌ನ  ಕೋರಿಕೆಯನ್ನು ಅಬ್ರಮೊವಿಚ್ ಸ್ವೀಕರಿಸಿದ್ದಾರೆ. ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ಉಕ್ರೇನ್ ನಿಯೋಗವನ್ನು ಭೇಟಿಮಾಡಿದ್ದ ಅಬ್ರಮೊವಿಚ್, ಅಲ್ಲಿಂದ ಮಾಸ್ಕೋಗೆ ಪ್ರಯಾಣಿಸಿ ಪತ್ರವನ್ನು ಪುಟಿನ್‌ಗೆ ಹಸ್ತಾಂತರಿಸಿದ್ದರು ಎಂದು ವರದಿಯಾಗಿದೆ. ಈ ಮಧ್ಯೆ, ಈ ತಿಂಗಳ ಆರಂಭದಲ್ಲಿ ಕೀವ್‌ನಲ್ಲಿ ಸಭೆ ಸೇರಿದ್ದ ಅಬ್ರಮೊವಿಚ್ ಹಾಗೂ ಉಕ್ರೇನ್‌ನ ನಿಯೋಗದ ಸದಸ್ಯರಲ್ಲಿ ವಿಷಪ್ರಾಶನದ ಲಕ್ಷಣಗಳು ಕಂಡುಬಂದಿದ್ದವು ಎಂದೂ ಪತ್ರಿಕೆ ವರದಿ ಮಾಡಿದೆ.


ಆದರೆ ಈ ವರದಿಯನ್ನು ಉಕ್ರೇನ್‌ನ ಅಧಿಕಾರಿಗಳು ತಳ್ಳಿಹಾಕಿದ್ದಾರೆ. ವಿಷಪ್ರಾಷನದ ಸಾಧ್ಯತೆಯನ್ನು ಅಮೆರಿಕದ ಅಧಿಕಾರಿಗಳೂ ನಿರಾಕರಿಸಿದ್ದಾರೆ. ಬಹುಷಃ ಹವಾಮಾನದ ಬದಲಾವಣೆಯಿಂದ ಅಸ್ವಸ್ಥರಾಗಿರಬಹುದು ಎಂದು ಅಮೆರಿಕ ಹೇಳಿದೆ. ಈ ಮಧ್ಯೆ, ಅಬ್ರಮೊವಿಚ್ ಆರಂಭಿಕ ಹಂತದಲ್ಲಿ ಸಂಧಾನ ಮಾತುಕತೆಯಲ್ಲಿ ಪಾತ್ರ ವಹಿಸಿದ್ದರು. ಆದರೆ ಈಗ ಸಂಧಾನ ಮಾತುಕತೆಯ ಪ್ರಕ್ರಿಯೆ ಎರಡೂ ದೇಶಗಳ ವಿದೇಶ ಸಚಿವರ ನಿಯೋಗದ ಮಟ್ಟದಲ್ಲಿದೆ ಎಂದು ರಶ್ಯದ ಅಧ್ಯಕ್ಷರ ಕಚೇರಿಯ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News