ಸ್ಟಾಕ್ ಮಾರ್ಕೆಟ್ ವಂಚನೆ: ಭಾರತೀಯ ಮೂಲದ 7 ಟೆಕಿಗಳ ವಿರುದ್ಧ ಅಮೆರಿಕದಲ್ಲಿ ಪ್ರಕರಣ ದಾಖಲು

Update: 2022-03-29 17:42 GMT

ಸಾಂದರ್ಭಿಕ ಚಿತ್ರ
 

ನ್ಯೂಯಾರ್ಕ್, ಮಾ.29: ಶೇರು(ಸ್ಟಾಕ್) ಮಾರುಕಟ್ಟೆಗೆ ಸಂಬಂಧಿಸಿದ ಇನ್‌ಸೈಡರ್ ಟ್ರೇಡಿಂಗ್ ವ್ಯವಹಾರದಲ್ಲಿ ಮಿಲಿಯಾಂತರ ಡಾಲರ್ ವಂಚನೆ ಎಸಗಿದ ಆರೋಪದಲ್ಲಿ ಭಾರತೀಯ ಮೂಲದ 7 ಟೆಕೀಗಳ ವಿರುದ್ಧ ಅಮೆರಿಕದ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಶೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಸಂಸ್ಥೆಯ ಕುರಿತ ಮಾಹಿತಿಯನ್ನು ಅಕ್ರಮವಾಗಿ ಪಡೆದು ಆ ಸಂಸ್ಥೆಯ ಶೇರುಗಳಲ್ಲಿ ಹಣ ಹೂಡಿಕೆ ಮಾಡಿ ವಂಚನೆ ಎಸಗುವುದನ್ನು ಇನ್‌ಸೈಡರ್ ಟ್ರೇಡಿಂಗ್ ಎನ್ನಲಾಗುತ್ತದೆ. ಈ ಪ್ರಕರಣದಲ್ಲಿ ಸ್ಯಾನ್‌ಫ್ರಾನ್ಸಿಸ್ಕೊ ಮೂಲದ ಟ್ವಿಲೊ ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಹರಿಪ್ರಸಾದ್ ಸುರೆ, ಲೋಕೇಶ್ ಲಗುಡು ಮತ್ತು ಚೋಟುಪ್ರಭು ತೇಜ್ ಪುಲಗಮ್ ತಮ್ಮ ನಿಕಟ ಸ್ನೇಹಿತರಾದ ದಿಲೀಪ್ ಕುಮಾರ್ ರೆಡ್ಡಿ, ಸಾಯಿ ನೆಕ್ಕಲಪುಡಿ, ಅಭಿಷೇಕ್ ಧರ್ಮಪುರಿಕರ್ ಹಾಗೂ ಚೇತನ್ ಪ್ರಭು ಎಂಬವರಿಗೆ ಸಂಸ್ಥೆಯ ವ್ಯವಹಾರ, ಲಾಭನಷ್ಟ, ಮುಂಬರುವ ಯೋಜನೆ ಮುಂತಾದ ಮಾಹಿತಿ ನೀಡಿ ಅವರು ಸಂಸ್ಥೆಯ ಶೇರುಗಳನ್ನು ಖರೀದಿಸಲು ಸಲಹೆ ನೀಡಿದ್ದರು ಎಂದು ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಕ್ ಕಮಿಷನ್(ಎಸ್ಇಸಿ) ಸೋಮವಾರ ವರದಿ ಮಾಡಿದೆ.


ಈ ವ್ಯವಹಾರದಲ್ಲಿ 1 ಮಿಲಿಯನ್ ಡಾಲರ್ಗೂ ಅಧಿಕ ಮೊತ್ತವನ್ನು ಗಳಿಸಿದ್ದಾರೆ. ಟ್ವಿಲೊ ಸಂಸ್ಥೆ 2020ರ ಮೇ 6ರಂದು ತನ್ನ ವಾರ್ಷಿಕ ಲೆಕ್ಕಪತ್ರದಲ್ಲಿ ಆದಾಯದ ಬಗ್ಗೆ ವಿವರ ನೀಡುವ ಮೊದಲೇ ಮೇಲೆ ಉಲ್ಲೇಖಿಸಿದ ಉದ್ಯೋಗಿಗಳು ಈ ಮಾಹಿತಿಯನ್ನು ತಮ್ಮ ಮಿತ್ರರಿಗೆ ರವಾನಿಸಿ ಶೇರು ಮಾರುಕಟ್ಟೆಯಲ್ಲಿ ವಂಚನೆಯ ವ್ಯವಹಾರ ನಡೆಸಿದ್ದಾರೆ ಎಂದು ಎಸ್ಇಸಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News