ಪಾಕಿಸ್ತಾನ: ಎಪ್ರಿಲ್ 3ರಂದು ಅವಿಶ್ವಾಸ ನಿರ್ಣಯದ ಮತದಾನ

Update: 2022-03-29 18:46 GMT

ಇಸ್ಲಮಾಬಾದ್, ಮಾ.29: ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ಖಾನ್ ವಿರುದ್ಧ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಕುರಿತ ಚರ್ಚೆ ಸಂಸತ್ತಿನಲ್ಲಿ ಮಾರ್ಚ್ 31ರಂದು ಆರಂಭವಾಗಲಿದ್ದು ಅವಿಶ್ವಾಸ ನಿರ್ಣಯದ ಮೇಲಿನ ಮತದಾನ ಎಪ್ರಿಲ್ 3ರಂದು ನಡೆಯಲಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ಶೇಖ್ ರಶೀದ್ ಹೇಳಿದ್ದಾರೆ.

ಇಸ್ಲಮಾಬಾದ್‌ನಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಧಾನಿ ಇಮ್ರಾನ್‌ಖಾನ್‌ಗೆ ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು. ಅಲ್ಲದೆ, ಆಡಳಿತಾರೂಢ ಪಿಟಿಐ ಸರಕಾರಕ್ಕೆ ಬೆಂಬಲ ನೀಡುವ ವಿಷಯದಲ್ಲಿ ಮಿತ್ರಪಕ್ಷ ಪಿಎಂಎಲ್-ಕ್ಯು ಪಕ್ಷದಲ್ಲಿ ಭಿನ್ನಮತ ಮೂಡಿದೆ ಎಂಬ ವರದಿಯನ್ನು ತಳ್ಳಿಹಾಕಿದರು ಎಂದು ‘ದಿ ನ್ಯೂಸ್ ಇಂಟರ್ನ್ಯಾಷನಲ್’ ವರದಿ ಮಾಡಿದೆ.

ಪಿಎಂಎ-ಕ್ಯು ಪಕ್ಷದ ನಿಲುವನ್ನು ಶ್ಲಾಘಿಸಿದ ರಶೀದ್, ಎಂಕ್ಯುಎಂ-ಪಿ ಪಕ್ಷೂ ಸರಕಾರವನ್ನು ಬೆಂಬಲಿಸುವ ನಿರೀಕ್ಷೆಯಿದೆ ಎಂದರು. ರವಿವಾರ ಪ್ರಧಾನಿ ನಡೆಸಿದ ರ್ಯಾಲಿಯಲ್ಲಿ ಬೃಹತ್ ಪ್ರಮಾಣದಲ್ಲಿ ಜನ ಸೇರಿರುವುದು ಇಡೀ ದೇಶವೇ ಪ್ರಧಾನಿಯವರ ಬೆಂಬಲಕ್ಕಿದೆ ಎಂಬುದರ ದ್ಯೋತಕವಾಗಿದೆ ಎಂದರು. ಸೋಮವಾರ ಇಮ್ರಾನ್ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆಯಾದ ಬಳಿಕ ಸದನವನ್ನು ಮಾರ್ಚ್ 31ಕ್ಕೆ ಮುಂದೂಡಲಾಗಿತ್ತು.
 
ಇದೇ ಸಂದರ್ಭ, ದುಷ್ಕೃತ್ಯಗಳಿಗೆ ಸಂಚು ಹೂಡಿದ್ದ 4 ಭಯೋತ್ಪಾದಕರನ್ನು ಭದ್ರತಾ ಪಡೆ ಬಂಧಿಸಿದ್ದು ವರ ವಿರುದ್ಧ ಭಯೋತ್ಪಾದನೆ ನಿಗ್ರಹ ಕಾಯ್ದೆಯಡಿ ಪ್ರಕರಣ ಜರಗಿಸಲಾಗುವುದು ಎಂದು ರಶೀದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News