ಏಕದಿನ ರ‍್ಯಾಂಕಿಂಗ್: ಮಿಥಾಲಿ ರಾಜ್, ಜೂಲನ್ ಗೋಸ್ವಾಮಿಗೆ ಭಡ್ತಿ

Update: 2022-03-30 03:28 GMT
Photo: Twitter

ದುಬೈ: ಭಾರತದ ನಾಯಕಿ ಮಿಥಾಲಿ ರಾಜ್ ಹಾಗೂ ಹಿರಿಯ ವೇಗದ ಬೌಲರ್ ಜೂಲನ್ ಗೋಸ್ವಾಮಿ ಮಂಗಳವಾರ ಬಿಡುಗಡೆಯಾಗಿರುವ ಐಸಿಸಿ ಮಹಿಳಾ ಏಕದಿನ ರ್ಯಾಂಕಿಂಗ್‌ನಲ್ಲಿ ಭಡ್ತಿ ಪಡೆದಿದ್ದಾರೆ. ಈಗ ನ್ಯೂಝಿಲ್ಯಾಂಡ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ನೀಡಿರುವ ಪ್ರದರ್ಶನವನ್ನು ಆಧರಿಸಿ ಮಿಥಾಲಿ ಎರಡು ಸ್ಥಾನ ಮೇಲಕ್ಕೇರಿ 6ನೇ ಸ್ಥಾನ ತಲುಪಿದರೆ, ಗೋಸ್ವಾಮಿ ಐದನೇ ಸ್ಥಾನಕ್ಕೆ ಏರಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ರವಿವಾರ ಭಾರತ ಆಡಿದ್ದ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ರಾಜ್ ಅರ್ಧಶತಕವನ್ನು ಸಿಡಿಸಿದ್ದರು. ಆದರೆ, ಕೊನೆಯ ಎಸೆತದಲ್ಲಿ ವೀರೋಚಿತ ಸೋಲುಂಡಿದ್ದ ಭಾರತ ಮಹಿಳಾ ತಂಡವು ಟೂರ್ನಿಯಿಂದ ನಿರ್ಗಮಿಸಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ 71 ರನ್ ಗಳಿಸಿದ್ದ ಸ್ಟಾರ್ ಓಪನರ್ ಸ್ಮತಿ ಮಂಧಾನ 10ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಬೌಲರ್‌ಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಜೋಡಿ ಮರಿಝಾನೆ ಕಾಪ್ ಹಾಗೂ ಅಯಾಬೊಂಗಾ ಖಾಕಾರನ್ನು ಹಿಂದಿಕ್ಕಿದ ಗೋಸ್ವಾಮಿ 5ನೇ ಸ್ಥಾನ ಪಡೆದಿದ್ದಾರೆ.

ಆದರೆ ಗೋಸ್ವಾಮಿಯವರು ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ 9ನೇ ಸ್ಥಾನ ಕಳೆದುಕೊಂಡಿದ್ದಾರೆ. 217 ರೇಟಿಂಗ್ ಪಾಯಿಂಟ್ಸ್ ಪಡೆದಿರುವ ಗೋಸ್ವಾಮಿ ಇದೀಗ 10ನೇ ಸ್ಥಾನದಲ್ಲಿದ್ದಾರೆ. ಭಾರತದ ಇನ್ನೋರ್ವ ಆಟಗಾರ್ತಿ ದೀಪ್ತಿ ಶರ್ಮಾ 7ನೇ ಸ್ಥಾನ ಉಳಿಸಿಕೊಂಡಿದ್ದಾರೆ.

ಈಗ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಎಲ್ಲ ಆಟಗಾರ್ತಿಯರಿಗಿಂತ ಹೆಚ್ಚು ರನ್(433 ರನ್) ಗಳಿಸಿರುವ ದಕ್ಷಿಣ ಆಫ್ರಿಕಾದ ಲಾರಾ ವೋಲ್ವಾರ್ಡ್ಟ್ ಎರಡು ಸ್ಥಾನ ಮೇಲಕ್ಕೇರಿದ್ದಾರೆ. ಆಸ್ಟ್ರೇಲಿಯದ ಅಲಿಸಾ ಹಾಗೂ ಬೆತ್ ಮೂನಿಯವರನ್ನು ಹಿಂದಿಕ್ಕಿ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News