ಗುಂಪು ಹಲ್ಲೆ, ಹತ್ಯೆಯನ್ನು ದ್ವೇಷಾಪರಾಧ ಎಂದು ಪರಿಗಣನೆ: ಅಮೆರಿಕದಲ್ಲಿ ನೂತನ ನಿಯಮ ಜಾರಿ
ವಾಷಿಂಗ್ಟನ್, ಮಾ.30: ಜನಾಂಗೀಯ ದ್ವೇಷದ ಗುಂಪು ಹಲ್ಲೆ ಮತ್ತು ಹತ್ಯೆಯನ್ನು ದ್ವೇಷಾಪರಾಧ ಎಂದು ಪರಿಗಣಿಸುವ ಕಾಯ್ದೆಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮಂಗಳವಾರ ಸಹಿ ಹಾಕಿದ್ದಾರೆ.ಜನಾಂಗೀಯ ದ್ವೇಷದ ಗುಂಪು ಹಲ್ಲೆಯು ಸ್ಪಷ್ಟವಾದ ಭಯೋತ್ಪಾದಕ ಕೃತ್ಯವಾಗಿದೆ. ಇದನ್ನು ದ್ವೇಷದ ಅಪರಾಧ ಎಂದು ವಗೀಕರಿಸುವುದು ಅತ್ಯಂತ ಸೂಕ್ತವಾಗಿದೆ ಎಂದು ಬೈಡನ್ ಪ್ರತಿಕ್ರಿಯಿಸಿದ್ದಾರೆ. ರೋಸ್‌ಗಾರ್ಡನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಗುಂಪು ಹಲ್ಲೆ ಪ್ರಕರಣ ವಿರೋಧಿ ಅಭಿಯಾನದ ಪ್ರಮುಖ ಮತ್ತು ಪ್ರಮುಖ ಕಪ್ಪು ವರ್ಣೀಯ ಪತ್ರಕರ್ತೆ ಐಡಾ ಬಿ. ವೆಲ್ಸ್ ಅವರ ಮರಿ ಮೊಮ್ಮಗಳು ಮಿಶೆಲ್ ಡಸ್ಟರ್ ಮತ್ತಿತರರು ಪಾಲ್ಗೊಂಡಿದ್ದರು.
ಇದೀಗ ಹೊಸ ಕಾಯ್ದೆಯಡಿ ಪ್ರಕರಣ ದಾಖಲಾದ ವ್ಯಕ್ತಿ 30 ವರ್ಷದವರೆಗೆ ಜೈಲುಶಿಕ್ಷೆಗೆ ಗುರಿಯಾಗಬಹುದು. 1950ರಲ್ಲಿ ಕ್ರೂರ ಹತ್ಯೆಯಾದ 14 ವರ್ಷದ ಆಫ್ರಿಕನ್ ಅಮೆರಿಕನ್ ಎಮ್ಮೆಟ್ ಟಿಲ್ ಎಂಬ ಬಾಲಕನ ಹೆಸರನ್ನು ಈ ಕಾಯ್ದೆಗೆ ಇಡಲಾಗಿದೆ. ಜನಾಂಗೀಯ ದ್ವೇಷ ಎಂಬುದು ಹಳೆಯ ಸಮಸ್ಯೆಯಲ್ಲ, ನಿರಂತರ ಸಮಸ್ಯೆಯಾಗಿದೆ. ದ್ವೇಷ ಎಂಬುದು ಎಂದಿಗೂ ತೊಲಗುವುದಿಲ್ಲ, ಅದು ಮರೆಮಾಚಿಕೊಂಡಿರುತ್ತದೆ ಎಂದು ಬೈಡನ್ ಹೇಳಿದರು. ದೇಶದಲ್ಲಿ ಜನಾಂಗೀಯ ಭಯೋತ್ಪಾದನೆ ಕೃತ್ಯ ಇನ್ನೂ ಮರುಕಳಿಸುತ್ತಿದೆ ಎಂದು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದರು.