ಹೆಚ್ಚುತ್ತಿರುವ ಪಾಶ್ಚಾತ್ಯ ದೇಶಗಳ ಒತ್ತಡ: ನಾಳೆ ಭಾರತಕ್ಕೆ ರಶ್ಯ ವಿದೇಶಾಂಗ ಸಚಿವರ ಭೇಟಿ

Update: 2022-03-30 15:53 GMT
photo courtesy:twitter/@FinancialXpress

ಹೊಸದಿಲ್ಲಿ,ಮಾ.30: ರಶ್ಯದ ವಿದೇಶಾಂಗ ಸಚಿವ ಸೆರ್ಗಿ ಲಾವ್ರೊವ್ ಅವರು ಭಾರತಕ್ಕೆ ಗುರುವಾರದಿಂದ ಎರಡು ದಿನಗಳ ಅಧಿಕೃತ ಭೇಟಿಯನ್ನು ನೀಡಲಿದ್ದಾರೆ. ಉಕ್ರೇನ್ ಮೇಲೆ ಪುಟಿನ್ ದಾಳಿಯ ಬಳಿಕ ಇದು ಭಾರತಕ್ಕೆ ರಶ್ಯದ ಮೊದಲ ಅತ್ಯುನ್ನತ ಮಟ್ಟದ ಭೇಟಿಯಾಗಿದೆ. ಕಳೆದ ವಾರ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಭಾರತಕ್ಕೆ ಭೇಟಿ ನೀಡಿದ್ದರು.

ಪಾಶ್ಚಾತ್ಯ ದೇಶಗಳಿಂದ ಒತ್ತಡ ಹೆಚ್ಚುತ್ತಿದ್ದರೂ ಉಕ್ರೇನ್ ಮೇಲೆ ರಶ್ಯದ ಆಕ್ರಮಣವನ್ನು ಚೀನಾ ಮತ್ತು ಭಾರತ ಖಂಡಿಸಿಲ್ಲ. ರಶ್ಯವನ್ನು ಖಂಡಿಸಿದ್ದ ವಿಶ್ವಸಂಸ್ಥೆಯ ನಿರ್ಣಯಗಳ ಮೇಲಿನ ಮತದಾನದಿಂದಲೂ ದೂರವಿದ್ದ ಭಾರತವು ರಶ್ಯದಿಂದ ತೈಲ ಮತ್ತು ಇತರ ಸರಕುಗಳ ಖರೀದಿಯನ್ನು ಮುಂದುವರಿಸಿದೆ.

ದಶಕಗಳಿಂದಲೂ ಭಾರತ ಮತ್ತು ರಶ್ಯ ನಿಕಟ ಸಂಬಂಧವನ್ನು ಹೊಂದಿವೆ. ರಶ್ಯವನ್ನು ತನ್ನ ‘ದೀರ್ಘಕಾಲೀನ ಮತ್ತು ಸಮಯ-ಪರೀಕ್ಷಿತ ಮಿತ್ರ ’ಎಂದು ಬಣ್ಣಿಸುವ ಭಾರತವು ತನ್ನ ಪ್ರಮುಖ ಮಿಲಿಟರಿ ಉಪಕರಣಗಳನ್ನು ಆ ರಾಷ್ಟ್ರದಿಂದ ಖರೀದಿಸುತ್ತಿದೆ.ಲಾವ್ರೊವ್ ತನ್ನ ಭಾರತ ಪ್ರವಾಸದ ಅವಧಿಯಲ್ಲಿ ಯಾರನ್ನು ಭೇಟಿಯಾಗಲಿದ್ದಾರೆ ಎಂಬ ಬಗ್ಗೆ ಯಾವುದೇ ವಿವರಗಳನ್ನು ವಿದೇಶಾಂಗ ಸಚಿವಾಲಯವು ನೀಡಿಲ್ಲ. ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಲಿಝ್ ಟ್ರಸ್ ಮತ್ತು ಅಮೆರಿಕದ ಅಂತರರಾಷ್ಟ್ರೀಯ ಆರ್ಥಿಕತೆಗಾಗಿ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ದಲೀಪ್ ಸಿಂಗ್ ಅವರೂ ಇದೇ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.

ರಶ್ಯದ ವಿರುದ್ಧ ಅಮೆರಿಕವು ದಂಡನೀಯ ಆರ್ಥಿಕ ನಿರ್ಬಂಧಗಳನ್ನು ಹೇರುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿರುವ ಭಾರತೀಯ-ಅಮೆರಿಕನ್ ದಲೀಪ್ ಸಿಂಗ್ ಅವರು ಉಕ್ರೇನ್ ವಿರುದ್ಧ ರಶ್ಯದ ‘ನ್ಯಾಯಸಮ್ಮತವಲ್ಲದ ಯುದ್ಧ ’ದ ಪರಿಣಾಮಗಳು ಮತ್ತು ಭಾರತ-ಪೆಸಿಫಿಕ್ ಆರ್ಥಿಕ ಚೌಕಟ್ಟಿನ ಅಭಿವೃದ್ಧಿಯ ಕುರಿತು ಭಾರತದ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ ಎಂದು ಶ್ವೇತಭವನವು ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News