ದ್ವೇಷ ಭಾಷಣ: ಕಾಳಿಚರಣ್ ವಿರುದ್ಧ ಛತ್ತೀಸ್ಗಡ ಪೊಲೀಸರಿಂದ ಆರೋಪಪಟ್ಟಿ ಸಲ್ಲಿಕೆ
Update: 2022-03-30 21:56 IST
ರಾಯಪುರ,ಮಾ.30: ರಾಯಪುರ ಪೊಲೀಸರು ವಿವಾದಾತ್ಮಕ ಧಾರ್ಮಿಕ ಮುಖ್ಯಸ್ಥ ಕಾಳಿಚರಣ್ ವಿರುದ್ಧ ಕೊನೆಗೂ 50 ಪುಟಗಳ ಆರೋಪ ಪಟ್ಟಿಯನ್ನು ಇಲ್ಲಿಯ ಸಿಜೆಎಂ ನ್ಯಾಯಾಲಯದಲ್ಲಿ ಸಲ್ಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಬುಧವಾರ ತಿಳಿಸಿದರು. ಮಹಾತ್ಮಾ ಗಾಂಧಿಯವರ ಅವಹೇಳನ ಮತ್ತು ಅವರ ಹಂತಕ ನಾಥುರಾಮ ಗೋಡ್ಸೆಯನ್ನು ಪ್ರಶಂಸಿಸಿ ತನ್ನ ಹೇಳಿಕೆಗಳಿಂದಾಗಿ ಕಾಳಿಚರಣ ಕಳೆದ 91 ದಿನಗಳಿಂದಲೂ ರಾಯಪುರ ಸೆಂಟ್ರಲ್ ಜೈಲಿನಲ್ಲಿ ಬಂಧನದಲ್ಲಿದ್ದಾರೆ. ಮಹಾರಾಷ್ಟ್ರ ಮೂಲದ ಕಾಳಿಚರಣ ಕಳೆದ ವರ್ಷದ ಡಿ.26ರಂದು ರಾಯಪುರದಲ್ಲಿ ಆಯೋಜಿಸಲಾಗಿದ್ದ ಧರ್ಮಸಂಸದ್ನ ವೇದಿಕೆಯಲ್ಲಿಯೂ ಗಾಂಧೀಜಿ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದರು.
ರಾಯಪುರದಲ್ಲಿ ಕಾಳಿಚರಣ ವಿರುದ್ಧ ಎಫ್ಐಆರ್ ದಾಖಲಾದ ಬಳಿಕ ರಾಜ್ಯದ ಪೊಲೀಸರು ಅವರನ್ನು ಮಧ್ಯಪ್ರದೇಶದ ಖಜುರಾಹೊದ ಲಾಡ್ಜ್ವೊಂದರಿಂದ ಬಂಧಿಸಿದ್ದರು. ಅವರ ವಿರುದ್ಧ ಐಪಿಸಿಯ ವಿವಿಧ ಕಲಮ್ಗಳಡಿ ಪ್ರಕರಣ ದಾಖಲಾಗಿದೆ.