×
Ad

ಬೆದರಿಕೆ ಈಗಲೂ ಮುಗಿದಿಲ್ಲ: ಅಮೆರಿಕ ಎಚ್ಚರಿಕೆ

Update: 2022-03-30 23:37 IST

ಕೀವ್, ಮಾ.30: ಉಕ್ರೇನ್ ರಾಜಧಾನಿ ಕೀವ್ ಹಾಗೂ ಇತರ ಪ್ರದೇಶಗಳಲ್ಲಿ ಸೇನೆಯ ಕಾರ್ಯಾಚರಣೆಯನ್ನು ಕಡಿಮೆಗೊಳಿಸುವ ರಶ್ಯದ ವಾಗ್ದಾನದ ಬಗ್ಗೆ ಎಚ್ಚರಿಕೆಯ ಪ್ರತಿಕ್ರಿಯೆ ನೀಡಿರುವ ಪಾಶ್ಚಿಮಾತ್ಯ ದೇಶಗಳು, ಇದು ಉಕ್ರೇನ್ನ ಇತರ ಭಾಗಗಳಲ್ಲಿ ಸೇನಾ ಕಾರ್ಯಾಚರಣೆ ನಡೆಸುವ ಸೂಚನೆಯಾಗಿರಬಹುದು ಎಂದಿವೆ.

ಟರ್ಕಿಯ ರಾಜಧಾನಿ ಇಸ್ತಾನ್‌ಬುಲ್‌ನಲ್ಲಿ ರಶ್ಯ-ಉಕ್ರೇನ್ ನಿಯೋಗದ ಮಧ್ಯೆ ನಡೆದ ಸಂಧಾನ ಮಾತುಕತೆಯ ಬಳಿಕ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ರಶ್ಯದ ಸಹಾಯಕ ರಕ್ಷಣಾ ಸಚಿವ ಅಲೆಕ್ಸಾಂಡರ್ ಫೊಮಿನ್, ಪರಸ್ಪರ ವಿಶ್ವಾಸ ವೃದ್ಧಿಸಲು ಮತ್ತು ಮತ್ತಷ್ಟು ಮಾತುಕತೆಗೆ ಸೂಕ್ತ ವಾತಾವರಣ ನಿರ್ಮಿಸಲು ಹಾಗೂ ಈ ಮೂಲಕ ಒಪ್ಪಂದ ಸಾಧಿಸುವ ಅಂತಿಮ ಉದ್ದೇಶಕ್ಕೆ ಪೂರಕವಾಗಿ ಕೀವ್ ಹಾಗೂ ಚೆರ್ನಿಹಿವ್ನಲ್ಲಿ ಸೈನಿಕ ಕಾರ್ಯಾಚರಣೆಯನ್ನು ಕಡಿಮೆಗೊಳಿಸಲು ನಿರ್ಧರಿಸಲಾಗಿದೆ ಎಂದಿದ್ದರು. ಆದರೆ ಸಂಘರ್ಷ ತೀವ್ರಗೊಂಡಿರುವ ಇತರ ಪ್ರದೇಶಗಳಾದ ಮರಿಯುಪೋಲ್, ಸುಮಿ, ಖಾರ್ಕಿವ್, ಖೆರ್ಸಾನ್, ಮಿಕೊಲಯಿವ್ ಪ್ರಾಂತಗಳ ಬಗ್ಗೆ ಅವರು ಯಾವುದೇ ಉಲ್ಲೇಖ ಮಾಡಿಲ್ಲ.ಕೀವ್ ಹಾಗೂ ಸುತ್ತಮುತ್ತಲ ಪ್ರದೇಶದಿಂದ ಅತ್ಯಲ್ಪ ಪ್ರಮಾಣದಲ್ಲಿ ತುಕಡಿಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಆರಂಭಿಸಿದೆ. ರಶ್ಯದ ಈ ನಡೆ ಯುದ್ಧದಿಂದ ಹಿಂದೆ ಸರಿಯುವ ಬದಲು, ಸ್ಥಾನ ಬದಲಾಯಿಸುವ ಪ್ರಕ್ರಿಯೆಯಾಗಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಬುಧವಾರ ಪ್ರತಿಕ್ರಿಯಿಸಿದೆ. ಬೆದರಿಕೆ ಇನ್ನೂ ಅಂತ್ಯಗೊಂಡಿಲ್ಲ. ಉಕ್ರೇನ್‌ನ ಇತರ ಭಾಗಗಳಲ್ಲಿ ಹೆಚ್ಚಿನ ಆಕ್ರಮಣ ವೀಕ್ಷಿಸಲು ನಾವೆಲ್ಲಾ ಸಿದ್ಧರಾಗಬೇಕಿದೆ. ಕೀವ್‌ಗೆ ಎದುರಾಗಿರುವ ಬೆದರಿಕೆ ಇನ್ನೂ ಮುಗಿದಿಲ್ಲ ಎಂದು ಪೆಂಟಗಾನ್ನ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.

ರಶ್ಯ ತನ್ನ ಆಕ್ರಮಣವನ್ನು ಉಕ್ರೇನ್‌ನ ಉತ್ತರಪ್ರಾಂತದ ಬದಲು ಪೂರ್ವದ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರಾಂತದತ್ತ ತಿರುಗಿಸಿರುವ ಲಕ್ಷಣವಿದೆ ಎಂದು ಬ್ರಿಟನ್ನ ರಕ್ಷಣಾ ಇಲಾಖೆ ಪ್ರತಿಕ್ರಿಯಿಸಿದೆ. ಡೊನೆಟ್ಸ್ಕ್ ಸ್ವಲ್ಪ ಭಾಗ ರಶ್ಯ ಬೆಂಬಲಿತ ಪ್ರತ್ಯೇಕತಾವಾದಿಗಳ ನಿಯಂತ್ರಣದಲ್ಲಿದೆ. ಡೊನೆಟ್ಸ್ಕ್ ಪ್ರಾಂತವನ್ನು ಪೂರ್ಣವಾಗಿ ಉಕ್ರೇನ್‌ನಿಂದ ಬೇರ್ಪಡಿಸುವುದು ರಶ್ಯದ ಯೋಜನೆಯಾಗಿದೆ ಎಂದು ಪಾಶ್ಚಿಮಾತ್ಯ ದೇಶಗಳು ಪ್ರತಿಪಾದಿಸುತ್ತಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ಉಕ್ರೇನಿಯನ್ನರು ಭೋಳೆ ಸ್ವಭಾವದವರಲ್ಲ. ಈ 34 ದಿನಗಳ ಆಕ್ರಮಣದಲ್ಲಿ ಮತ್ತು ಡೊನ್ಬಾಸ್ ಪ್ರಾಂತದಲ್ಲಿ ಕಳೆದ 8 ವರ್ಷಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಉಕ್ರೇನಿಯನ್ನರು ಫಲಿತಾಂಶದ ಮೇಲೆ ವಿಶ್ವಾಸ ಇಡಬೇಕು ಎಂಬ ಒಂದು ವಿಷಯವನ್ನು ಕಲಿತುಕೊಂಡಿದ್ದಾರೆ’ ಎಂದು ಹೇಳಿದ್ದಾರೆ.ಕೀವ್ ಹಾಗೂ ಇತರ ಕೆಲ ಪ್ರದೇಶದಲ್ಲಿ ಸೇನಾ ಚಟುವಟಿಕೆ ಕಡಿಮೆಗೊಳಿಸುವ ರಶ್ಯದ ಭರವಸೆ ಬಹುಷಃ ಸೈನಿಕರನ್ನು ವರ್ಗಾಯಿಸಲು ಮತ್ತು ಜಗತ್ತನ್ನು ದಾರಿತಪ್ಪಿಸುವ ಗುರಿ ಹೊಂದಿದೆ ಎಂದು ಉಕ್ರೇನ್ನ ರಕ್ಷಣಾ ಪಡೆಯ ಮುಖ್ಯಸ್ಥರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News