ವಿಶ್ವಸಂಸ್ಥೆ ಶಾಂತಿಪಾಲನಾ ನಿಯೋಗದ ಹೆಲಿಕಾಪ್ಟರ್ ಪತನ: 8 ಮಂದಿ ಮೃತ್ಯು

Update: 2022-03-30 18:28 GMT
photo courtesy:twitter

ಕಿನ್ಶಾಸ, ಮಾ.30: ಕಾಂಗೊ ಗಣರಾಜ್ಯದಲ್ಲಿ ಕಾರ್ಯನಿರತವಾಗಿದ್ದ ವಿಶ್ವಸಂಸ್ಥೆಯ ಶಾಂತಿಪಾಲನಾ ನಿಯೋಗದ ಹೆಲಿಕಾಪ್ಟರ್ ನಾರ್ಥ್ ಕಿವು ಪ್ರಾಂತದಲ್ಲಿ ಪತನಗೊಂಡಿದ್ದು 8 ಮಂದಿ ಮೃತಪಟ್ಟಿರುವುದಾಗಿ ವಿಶ್ವಸಂಸ್ಥೆಯ ನಿಯೋಗದ ಹೇಳಿಕೆ ತಿಳಿಸಿದೆ. ಆ ದೇಶದ ಗಲಭೆಗ್ರಸ್ತ ಪೂರ್ವ ಪ್ರಾಂತದಲ್ಲಿ ಈ ಅಪಘಾತ ಸಂಭವಿಸಿದೆ. ಈ ಪ್ರಾಂತದಲ್ಲಿ ಕಳೆದ ಕೆಲ ದಿನಗಳಿಂದ ಬಂಡುಗೋರರು ಹಾಗೂ ಕಾಂಗೊ ಸೇನೆಯ ಮಧ್ಯೆ ಹೋರಾಟ ನಡೆಯುತ್ತಿದೆ.

ಹೆಲಿಕಾಪ್ಟರ್ನಲ್ಲಿ ಶಾಂತಿಪಾಲನಾ ಪಡೆಯ 8 ಸದಸ್ಯರಿದ್ದರು. ಇವರಲ್ಲಿ 6 ಪಾಕಿಸ್ತಾನದ ಯೋಧರು, ರಶ್ಯ ಮತ್ತು ಸೆರ್ಬಿಯದ ತಲಾ ಒಬ್ಬ ಯೋಧರಿದ್ದರು. ಶಾಂತಿಪಾಲನಾ ನಿಯೋಗ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಯೋಧರ ಮೃತದೇಹವನ್ನು ಪತ್ತೆಹಚ್ಚಲಾಗಿದ್ದು ಅಪಘಾತದ ಕುರಿತು ತನಿಖೆ ಆರಂಭವಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಬಂಡುಗೋರರು ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದ್ದಾರೆ ಎಂದು ಕಾಂಗೊದ ಸೇನೆ ಹೇಳಿದೆ. ಆದರೆ ಇದನ್ನು ನಿರಾಕರಿಸಿರುವ ಬಂಡುಗೋರ ಪಡೆ, ಕಾಂಗೊದ ಸೇನೆ ಈ ಕೃತ್ಯ ಎಸಗಿದೆ ಎಂದು ಆರೋಪಿಸಿದೆ.ದುರಂತದ ಬಗ್ಗೆ ಪಾಕ್ ಪ್ರಧಾನಿ ಇಮ್ರಾನ್ಖಾನ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಗಡಿಭಾಗದಲ್ಲಿ ಬಂಡುಗೋರ ಪಡೆ ನಡೆಸುತ್ತಿರುವ ದುಷ್ಕೃತ್ಯದಿಂದ ಶಾಂತಿ ಮತ್ತು ಸ್ಥಿರತೆಗೆ ಅಡ್ಡಿಯಾಗಿದ್ದು ಹೆಲಿಕಾಪ್ಟರ್ ದುರಂತ ಘಟನೆಯಿಂದ ತೀವ್ರ ಆಘಾತವಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News